ನವದೆಹಲಿ: ಚಾಲನಾ ಪರವಾನಗಿ ಅವಧಿ ಮುಗಿದ ಮರುದಿನದಿಂದಲೇ ಚಾಲಕರು ತಮ್ಮ ಪರವಾನಗಿಯಲ್ಲಿ ನಮೂದಿಸಲಾದ ಯಾವುದೇ ವಾಹನವನ್ನು ಚಾಲನೆ ಮಾಡುವ ಕಾನೂನಾತ್ಮಕ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರವಾನಗಿ ಅವಧಿ ಮುಗಿದಿದ್ದರೂ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಹಿಂದೆ ಚಾಲನಾ ಪರವಾನಗಿ ಅವಧಿ ಮುಗಿದ ಬಳಿಕ ಅದನ್ನು ನವೀಕರಿಸಲು 30 ದಿನಗಳ ಕಾಲ ಅವಕಾಶವಿತ್ತು. ಆ ಅವಧಿಯಲ್ಲಿ ವಾಹನ ಚಾಲನೆ ಮಾಡಲು ಅನುಮತಿ ನೀಡಲಾಗುತ್ತಿತ್ತು. ಆದರೆ 2019ರ ತಿದ್ದುಪಡಿಯ ನಂತರ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಪರವಾನಗಿ ಅವಧಿ ಮುಗಿದ ತಕ್ಷಣವೇ, ಅಂದರೆ ಮರುದಿನದಿಂದಲೇ, ನವೀಕರಿಸದ ಪರವಾನಗಿಯೊಂದಿಗೆ ವಾಹನ ಚಾಲನೆ ಮಾಡಲು ಕಾನೂನು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ತೆಲಂಗಾಣ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿ (TSLPRB) ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ಈ ತೀರ್ಪು ಪ್ರಕಟವಾಗಿದೆ. ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನತುಲ್ಲಾ ಮತ್ತು ನ್ಯಾಯಮೂರ್ತಿ ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಸ್ಪಷ್ಟೀಕರಣ ನೀಡಿದೆ.
ನ್ಯಾಯಪೀಠ ತನ್ನ ಆದೇಶದಲ್ಲಿ, "ಒಬ್ಬ ವ್ಯಕ್ತಿ ತನ್ನ ಚಾಲನಾ ಪರವಾನಗಿಯನ್ನು ಅವಧಿ ಮುಗಿಯುವ ಮೊದಲು ನಿಯಮಿತವಾಗಿ ನವೀಕರಿಸುತ್ತಾ ಬಂದರೆ, ಅವನ ಪರವಾನಗಿ ನಿರಂತರವಾಗಿ ಮಾನ್ಯವಾಗಿರುತ್ತದೆ. ಹೀಗೆ ಪರವಾನಗಿ ಮುಗಿಯುವ ಮುನ್ನವೇ ನವೀಕರಣ ಮಾಡಿಕೊಂಡಿದ್ದರೆ, ಅಧಿಸೂಚನೆಗಳಲ್ಲಿ ನಿಗದಿಪಡಿಸಿದ ಅರ್ಹತಾ ವ್ಯಾಪ್ತಿಗೆ ಆತನು ಸೇರುತ್ತಾನೆ" ಎಂದು ಹೇಳಿದೆ. ಈ ತೀರ್ಪು ಚಾಲಕರಿಗೆ ಪರವಾನಗಿ ನವೀಕರಣದ ಮಹತ್ವವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.

