HEALTH TIPS

ಒಂದು ಕುಟುಂಬ ಹಲವು ವರ್ಷಗಳ ಕಾಲ ದೇಶವನ್ನು ಒತ್ತೆ ಇರಿಸಿಕೊಂಡಿತ್ತು: ಮೋದಿ ಆರೋಪ

ಲಖನೌ: 'ಒಂದು ಕುಟುಂಬವು ದೇಶವನ್ನು ಹಲವು ವರ್ಷಗಳ ಕಾಲ ಒತ್ತೆಯಾಗಿ ಇರಿಸಿಕೊಂಡಿತ್ತು' ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಮತ್ತು ಗಾಂಧಿ ಕುಟುಂಬದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದರು.

'ಬಿಜೆಪಿ ಸರ್ಕಾರವು ದೇಶವನ್ನು ಅದರಿಂದ ಮುಕ್ತಗೊಳಿಸಿತು' ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ, ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳನ್ನು ಪ್ರಚುರಪಡಿಸಲು ಮೀಸಲಾಗಿರುವ 'ರಾಷ್ಟ್ರೀಯ ಪ್ರೇರಣಾ ಸ್ಥಳ' ಮತ್ತು ರಾಷ್ಟ್ರೀಯ ಸ್ಮಾರಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ವಂಶಪಾರಂಪರ್ಯ ರಾಜಕೀಯವು ವಿಶಿಷ್ಟ ಸ್ವರೂಪವನ್ನು ಹೊಂದಿದೆ. ಅದು ಅಭದ್ರತೆಯಿಂದ ಸುತ್ತುವರಿದಿರುವ ಕಾರಣಕ್ಕೆ ಇತರರನ್ನು ಕೀಳಾಗಿ ಕಾಣಲು ಪ್ರಯತ್ನಿಸುತ್ತದೆ. ಅದರ ಈ ಪ್ರವೃತ್ತಿಯು ದೇಶದಲ್ಲಿ ರಾಜಕೀಯ ಅಸ್ಪಶ್ಯತೆಗೆ ಕಾರಣವಾಯಿತು' ಎಂದು ಅವರು ವಿವರಿಸಿದರು.

'ಬಿಜೆಪಿಯನ್ನು ಅಸ್ಪೃಶ್ಯನಂತೆ ಕಂಡಿದೆ'

'ಕಾಂಗ್ರೆಸ್‌ ಮೊದಲಿನಿಂದಲೂ ಬಿಜೆಪಿಯನ್ನು ಅಸ್ಪೃಶ್ಯನಂತೆ ನೋಡುತ್ತಿದೆ. ಆದರೆ, ನಾವು ಎಲ್ಲರಿಗೂ ಸಮಾನ ಗೌರವ ನೀಡುತ್ತಿದ್ದೇವೆ' ಎಂದು ಮೋದಿ ತಿಳಿಸಿದರು.

'ದೇಶದಲ್ಲಿ ರಸ್ತೆಗಳಿರಲಿ, ಪ್ರತಿಮೆಗಳಿರಲಿ ಒಂದೇ ಕುಟುಂಬದ ಸದಸ್ಯರ ಹೆಸರುಗಳನ್ನು ಹೊಂದಿದ್ದವು. ಸ್ಥಳಗಳೂ ಒಂದೇ ಕುಟುಂಬದವರ ಹೆಸರಿನಿಂದ ಕರೆಯಲ್ಪಡುತ್ತಿದ್ದವು. ಆದರೆ, ಬಿಜೆಪಿಯು ದೇಶವನ್ನು ಒಂದು ಕುಟುಂಬ ಕೇಂದ್ರಿತ ರಾಜಕೀಯದಿಂದ ಹೊರತಂದಿತು' ಎಂದು ಅವರು ಪ್ರತಿಪಾದಿಸಿದರು.

'ಅಂಬೇಡ್ಕರ್‌ಗೆ ದೊರೆಯದ ಗೌರವ'

ಗಾಂಧಿ ಕುಟುಂಬವನ್ನು 'ರಾಜಮನೆತನ' ಎಂದು ಕರೆದ ಮೋದಿ ಅವರು, ಈ ಪರಿವಾರದವರು ದಲಿತ ನಾಯಕ ಬಿ.ಆರ್‌.ಅಂಬೇಡ್ಕರ್‌ ಅವರ ಸಾಧನೆಗಳ ಬಗ್ಗೆ ಎಂದಿಗೂ ಪ್ರಸ್ತಾಪಿಸಿಲ್ಲ. ಅದರಿಂದ ಎಲ್ಲಿ ತಮ್ಮ ಪ್ರಾಮುಖ್ಯ ಕಡಿಮೆ ಆಗುತ್ತದೆಯೊ ಎಂಬುದು ಅವರ ಆತಂಕ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ಅಂಬೇಡ್ಕರ್‌ ಅವರಿಗೆ ಅರ್ಹವಾದ ಗೌರವವನ್ನು ಎಂದಿಗೂ ನೀಡಲಿಲ್ಲ ಎಂದು ಅವರು ಆರೋಪಿಸಿದರು.

'ನಮಗೆ ಹೆಮ್ಮೆಯಿದೆ'

'ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನ-ಮಾನದ ಹೆಸರಿನಲ್ಲಿ ಇದ್ದ ಗೋಡೆಯನ್ನು ಕೆಡವಲು ಅವಕಾಶ ಸಿಕ್ಕಿದ್ದಕ್ಕೆ ನಮಗೆ ಹೆಮ್ಮೆಯಿದೆ' ಎಂದು ಮೋದಿ ಇದೇ ವೇಳೆ ಹೇಳಿದರು.

'ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ದೇಶವು ಎರಡು ಕಾನೂನುಗಳು ಮತ್ತು ಎರಡು ಸಂವಿಧಾನಗಳನ್ನು ಹೊಂದಲು ಸಾಧ್ಯವಿಲ್ಲ ಎಂದಿದ್ದರು' ಎಂದು ಅವರು ಸ್ಮರಿಸಿದರು.

ಪ್ರೇರಣಾ ಸ್ಥಳದ ಕುರಿತು

ಪ್ರೇರಣಾ ಸ್ಥಳದ ಆವರಣ 65 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿದ್ದು ₹230 ಕೋಟಿ ವೆಚ್ಚದಲ್ಲಿ ಅದನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ 98000 ಚದರ ಅಡಿ ವಿಸ್ತೀರ್ಣದಲ್ಲಿ ಕಮಲದ ಆಕಾರದ ವಿನ್ಯಾಸದಲ್ಲಿ ಅತ್ಯಾಧುನಿಕ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ವಾಜಪೇಯಿ ಅವರ ಜತೆಗೆ ಶ್ಯಾಮ ಪ್ರಸಾದ್‌ ಮುಖರ್ಜಿ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ದೇಶಕ್ಕೆ ಕೊಡುಗೆ ನೀಡಿದ ನಾಯಕರ ಮಾಹಿತಿಯನ್ನು ಸ್ಮಾರಕದಲ್ಲಿ ಭಿತ್ತರಿಸಲಾಗಿದೆ. ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಈ ಸ್ಮಾರಕ ಸಂಕೀರ್ಣವನ್ನು ಉದ್ಘಾಟಿಸಲಾಯಿತು. ಮೋದಿ ಅವರ ಜತೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries