HEALTH TIPS

"ನೀವು ಆ ಕುರ್ಚಿಗೆ ಅರ್ಹರಲ್ಲ": ರಾಹುಲ್ ಗಾಂಧಿ ವಿರುದ್ಧ ನವಜೋತ್ ಕೌರ್ ಸಿಧು ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತ ನಾಯಕಿ ಹಾಗೂ ಪಂಜಾಬ್ ನ ಮಾಜಿ ಸಚಿವೆ ನವಜೋತ್ ಕೌರ್ ಸಿಧು ಅವರು ಕಾಂಗ್ರೆಸ್ ಸಂಸದ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಕತ್ವದ ವಿಚಾರದಲ್ಲಿ ರಾಹುಲ್ ಗಾಂಧಿಯ ನಡೆ-ನುಡಿಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದ ಅವರು, ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಮನೋಭಾವ ಮತ್ತು ಸಂವಾದಕ್ಕೆ ತೆರೆದ ಮನಸ್ಸು ಅವರಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಇನ್ನೂ ಗಾಂಧಿ ಕುಟುಂಬದ ಪ್ರಭಾವದಿಂದ ಹೊರಬಂದಿಲ್ಲ. ಮಾರ್ಗದರ್ಶನ ನೀಡಲು ಯತ್ನಿಸುವ ನಿಜವಾದ ಹಿತೈಷಿಗಳ ಮಾತುಗಳನ್ನು ಕೇಳಲು ಸಮಯ ನೀಡುವುದಿಲ್ಲ ಎಂದು ನವಜೋತ್ ಕೌರ್ ದೂರಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅವರು, "ಮೋದಿ ಆಧ್ಯಾತ್ಮಿಕ ವ್ಯಕ್ತಿ; ಅದು ಅವರ ವ್ಯಕ್ತಿತ್ವದಲ್ಲೇ ವ್ಯಕ್ತವಾಗುತ್ತದೆ" ಎಂದು ಹೇಳಿದರು.

ಯಾರನ್ನಾದರೂ ಭೇಟಿಯಾಗಲು ಎಂಟು ತಿಂಗಳು ಕಾಯಿಸುವುದು ನಾಯಕತ್ವಕ್ಕೆ ತಕ್ಕದ್ದಲ್ಲ ಎಂದು ನವಜೋತ್ ಕೌರ್ ಸಿಧು ಅಭಿಪ್ರಾಯಪಟ್ಟರು. ಒಬ್ಬ ನಾಯಕ ಪ್ರಾಮಾಣಿಕ ಹಾಗೂ ರಚನಾತ್ಮಕ ಸಲಹೆ ನೀಡುವವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು. ಸಲಹೆಗಳನ್ನು ಸ್ವೀಕರಿಸುವುದು ಅಥವಾ ನಿರಾಕರಿಸುವುದು ಅವರ ಆಯ್ಕೆ ಎಂದರು.

ರಾಹುಲ್ ಗಾಂಧಿ ಹೇಳುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದು ಟೀಕಿಸಿದ ಅವರು, ಪಂಜಾಬ್ಗೆ ಸಂಬಂಧಿಸಿದ ಅನ್ಯಾಯಗಳ ಬಗ್ಗೆ ತಿಳಿಸಲು ಕಳೆದ ಎಂಟು ತಿಂಗಳುಗಳಿಂದ ಸಮಯ ಕೇಳುತ್ತಿದ್ದೇನೆ ಎಂದರು. ಪಕ್ಷದ ಅಧ್ಯಕ್ಷರು ಅಥವಾ ರಾಜ್ಯಕ್ಕೆ ನೇಮಕಗೊಂಡ ನಾಯಕರು ಪಂಜಾಬ್ಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ ಎಂಬ ಗಂಭೀರ ಆರೋಪವನ್ನೂ ನವಜೋತ್ ಕೌರ್ ಮಾಡಿದ್ದಾರೆ. ತಮ್ಮ ಅಧೀನದಲ್ಲಿ ನಡೆಯುತ್ತಿರುವ ಸಂಗತಿಗಳ ಅರಿವು ನಾಯಕನಿಗೆ ಇಲ್ಲದಿದ್ದರೆ ಅವರು ಆ ಹುದ್ದೆಗೆ ಅರ್ಹರಲ್ಲ ಹಾಗೂ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೂ ಅವರೇ ಜವಾಬ್ದಾರರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪಂಜಾಬ್ಗಾಗಿ ಎಲ್ಲವನ್ನೂ ಬಿಟ್ಟು ಬಂದಿದ್ದರೂ ಉಪಮುಖ್ಯಮಂತ್ರಿ ಹುದ್ದೆ, ಏಳು ಇಲಾಖೆಗಳು ಹಾಗೂ ತಮಗೆ ಸಂಸದೆಯ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅಂತಿಮವಾಗಿ ಯಾವುದೂ ಸಿಗಲಿಲ್ಲ ಎಂದು ಸಿಧು ಅಸಮಾಧಾನ ವ್ಯಕ್ತಪಡಿಸಿದರು. ತಮಗೆ ಸ್ಥಳೀಯ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಇಲಾಖೆ ನೀಡಲಾಗಿದ್ದು, ಅವನ್ನೂ ಮುಖ್ಯಮಂತ್ರಿಯ ಸೂಚನೆಯಂತೆ ನಡೆಸಬೇಕಾಯಿತು ಎಂದು ಹೇಳಿದರು.

ರಾಹುಲ್ ಗಾಂಧಿ ತಮ್ಮ ಸುತ್ತಲಿನವರೇ ಭ್ರಷ್ಟರಾಗಿರುವಾಗ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದೇಕೆ ಎಂದು ಪ್ರಶ್ನಿಸಿದ ಅವರು, ತಪ್ಪುಗಳನ್ನು ಸೂಚಿಸುವ ಪ್ರಾಮಾಣಿಕರಿಗೆ ಸಮಯ ಕೊಡುವ ಮನೋಭಾವ ಕಾಣುತ್ತಿಲ್ಲ ಎಂದು ಆರೋಪಿಸಿದರು. ಇದೇ ರೀತಿಯ ನಡೆ ಮುಂದುವರಿದರೆ ಪಂಜಾಬ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries