ಕಾಸರಗೋಡು: ನೀಲೇಶ್ವರ ನಗರಸಭೆಯ 2025-26 ವಾರ್ಷಿಕ ಯೋಜನೆಯ ಅಂಗವಾಗಿ 'ಅಂಗಳದಲ್ಲಿ ಮೀನಿನ ಕೆರೆ' ಯೋಜನೆಯನ್ನು ಭಂಡಾರಪುರದ ಚಾತಂಗೈ ಕೆರೆಯಲ್ಲಿ ಆರಂಭಿಸಲಾಯಿತು. ಯೋಜನೆಯನ್ವಯ ಕೆರೆಗೆ ಮೀನಿನ ಮರಿಗಳನ್ನು ಅಳವಡಿಸುವ ಸಮಾರಂಭವನ್ನು ನಗರಸಭಾ ಅಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ ಉದ್ಘಾಟಿಸಿ ಮಾತನಾಡಿ, ಆಯಾ ಪ್ರದೇಶದ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಜನರಿಗೆ ಗುಣಮಟ್ಟದ ಮೀನುಗಳನ್ನು ಒದಗಿಸುವುದು ನಗರಸಭೆ ಜಾರಿಗೆ ತಂದಿರುವ ಯೋಜನೆಯ ಉದ್ದೇಶವಾಗಿದೆ. ಮುಮದಿನ ದಿನಗಳಲ್ಲಿ ಯೋಜನೆಯನ್ನು ಮತ್ತಷ್ಟುಪ್ರದೇಶಕ್ಕೆ ವಿಸ್ತರಿಸಲಾಗುವುದು ಎಂದುತಿಳಿಸಿದರು.
ವಾರ್ಡ್ ಕೌನ್ಸಿಲರ್ ಪಿ.ಯು. ರಾಮಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ. ವೇಣುಗೋಪಾಲ್, ವಿಜೇಶ್ ಮೊದಲಾದವರು ಉಪಸ್ಥಿತರಿದ್ದರು. ನಗರಸಭೆಯ ವಿವಿಧ ಪ್ರದೇಶಗಳಲ್ಲಿ ಯೋಜನೆ ಜಾರಿಗೊಳಿಸಲಾಗಿದ್ದು, ಕೆಲಸಕಾರ್ಯಗಳು ಪ್ರಗತಿಯಲ್ಲಿರುವುದಾಘಿ ಅಧಿಕಾರಿಗಳು ತಿಳಿಸಿದ್ದಾರೆ.


