ಕೋಟಕ್ಕಲ್: "ಸುನ್ನಿಗಳು ಸಮಸ್ತವನ್ನು ಬಿಟ್ಟುಹೋಗಿಲ್ಲ. ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಚರ್ಚೆಯ ವೇಳೆ ಸಭೆಯಿಂದ ಹೊರನಡೆದರೆ ಸದಸ್ಯತ್ವ ಕಳೆದುಕೊಂಡಂತಾಗುವುದಿಲ್ಲ; ಅದೇ ರೀತಿಯಾಗಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಿಂದ ನಾವು ದೂರವಾಗಿಲ್ಲ. ಸಮಸ್ತದ ಐಕ್ಯತೆಗೆ ನಾವು ಸದಾ ಸಿದ್ಧರಾಗಿದ್ದೇವೆ" ಎಂದು ಸಮಸ್ತ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಕೋಟ್ಟಕ್ಕಲ್ ಬಹ್ರುಲ್ ಉಲೂಮ್ ನಗರದಲ್ಲಿ ನಡೆದ ಘೋಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, "ಆ ದಿನ ಚರ್ಚಿಸಲಾದ ವಿಷಯಗಳು ಹೊಸದಾಗಿ ಸದಸ್ಯತ್ವ ಪಡೆದವರಿಗೆ ತಿಳಿದಿರಲಿಕ್ಕಿಲ್ಲ. ಆದರೂ ಸೌಹಾರ್ದಯುತ ಸಂವಾದದ ಮೂಲಕ ತೀರ್ಮಾನ ಕೈಗೊಳ್ಳಬಹುದು. ಸಯ್ಯಿದರೂ ಉಲಮಾಗಳೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಹೇಳಿದರು.
ಇದೇ ವೇಳೆ ಸಮಾಜದ ಸುಸ್ಥಿರ ಬೆಳವಣಿಗೆ ಹಾಗೂ ಸಮಗ್ರ ಪ್ರಗತಿಗೆ ಒಗ್ಗಟ್ಟಿನಿಂದ ನಿಲ್ಲುವುದು ಅವಶ್ಯಕ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಸಮಸ್ತ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಖಾಫಿ ನಿರ್ಣಯ ಮಂಡಿಸಿ, ಸಮಾಜದ ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ ಬೆಳೆಸುವುದು ಕಾಲದ ಅಗತ್ಯವಾಗಿದ್ದು, ಸ್ವಂತ ಅಸ್ತಿತ್ವವನ್ನು ಉಳಿಸಿಕೊಂಡೇ ಪರಸ್ಪರ ಕೈಜೋಡಿಸುವುದರಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ದಾರಿ ತೆರೆದಿಡುತ್ತದೆ ಎಂದು ಹೇಳಿದರು.
ಎರಡು ಸಮಸ್ತಗಳ ನಡುವಿನ ಐಕ್ಯ ಚರ್ಚೆಗಳಿಗೆ ಈಗಾಗಲೇ ಎರಡು ಮುಶಾವರಗಳು ಮಾನ್ಯತೆ ನೀಡಿರುವುದಾಗಿ ಸಮ್ಮೇಳನದಲ್ಲಿ ತಿಳಿಸಲಾಯಿತು. ಹಿಂದಿನ ಸಂವಾದಗಳಲ್ಲಿ ಧನಾತ್ಮಕ ಫಲಿತಾಂಶಗಳ ಬಗ್ಗೆ ವಿಶ್ವಾಸ ವ್ಯಕ್ತವಾಗಿದ್ದು, ನಂಬಿಕೆ ಹಾಗೂ ಕರ್ಮಾಧಾರಿತ ಆದರ್ಶಗಳ ನೆಲೆಯಲ್ಲಿ ಸಮಸ್ತದ ಸ್ಥಾಪಿತ ಗುರಿಗಳೊಳಗಿನ ಐಕ್ಯತೆಯನ್ನು ಸಾಧಿಸಲು ಇನ್ನಷ್ಟು ಸಿದ್ಧತೆ ಅಗತ್ಯವೆಂದು ಘೋಷಿಸಲಾಯಿತು. ಪದಗಳ ಮೂಲಕವಾಗಲಿ, ಕೆಲಸಗಳ ಮೂಲಕವಾಗಲಿ ಐಕ್ಯತೆಗೆ ಧಕ್ಕೆ ತರುವ ಸಂವಹನಗಳು ಯಾರಿಂದಲೂ ನಡೆಯಬಾರದು ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಯಿತು. ವಿಕೃತ ಪರಿಕಲ್ಪನೆಗಳ ಪ್ರಚಾರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಂಬಿಕೆ ಮತ್ತು ಆದರ್ಶಗಳ ಬಲದೊಂದಿಗೆ ಸ್ನೇಹಭಾವ ಬೆಳೆಸಿ ಜಗತ್ತಿನಾದ್ಯಂತ ಎಲ್ಲರನ್ನು ಒಗ್ಗೂಡಿಸಬೇಕೆಂದು ಮನವಿ ಮಾಡಲಾಯಿತು.
ಘೋಷಣಾ ಸಮ್ಮೇಳನವು ಸಯ್ಯಿದ್ ಅಲಿ ಬಾಫಖಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸಿದರು. ಸಮಸ್ತ ಕಾರ್ಯದರ್ಶಿ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ತಂಙಳ್, ಪೆರೋಡ್ ಅಬ್ದುಲ್ರಹ್ಮಾನ್ ಸಖಾಫಿ, ಸಿ. ಮಹಮ್ಮದ್ ಫೈಝಿ, ವಂಟೂರ್ ಅಬ್ದುಲ್ರಹ್ಮಾನ್ ಫೈಝಿ, ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಸ್ ಅಬ್ದುಲ್ಲ ಅಹ್‌ಸನಿ ಚೆಂಗಾನಿ, ಸುಲೈಮಾನ್ ಸಖಾಫಿ ಮಾಳಿಯೇಕಲ್, ಅಬ್ದುಲ್ ಜಲೀಲ್ ಸಖಾಫಿ ಚೆರುಶೋಲ ಹಾಗೂ ಅಲವಿ ಸಖಾಫಿ ಕೊಳತ್ತೂರು ಉಪನ್ಯಾಸ ನೀಡಿದರು. ಕೇರಳದ ವಿವಿಧ ಭಾಗಗಳಿಂದ ಆಯ್ಕೆಯಾದ ಪಂಡಿತರೊಂದಿಗೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ನೂರನೇ ವಾರ್ಷಿಕ ಸಮ್ಮೇಳನವು 2027ರ ಜನವರಿ 28, 29, 30 ಮತ್ತು 31ರಂದು ಮಲಪ್ಪುರಂ ವಾದಿ ಹರಮೈನ್‌ನಲ್ಲಿ ನಡೆಯಲಿದೆ ಎಂದು ಘೋಷಿಸಲಾಯಿತು. 'ಸಮಸ್ತ: 100 ಪ್ರಕಾಶ ವರ್ಷಗಳು' ಎಂಬ ವಿಷಯದಡಿ ಸಮ್ಮೇಳನ ನಡೆಯಲಿದೆ ಎಂದು ಅವರು ತಿಳಿಸಿದರು.

