ಆರ್‌ಟಿಐ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫರ್ಮೇಷನ್ (NCPRI), ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಹಾಗೂ ತನಿಖಾ ಪತ್ರಕರ್ತರ ಗುಂಪಾದ ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಲ್ಲಿಸಿದ ಮೂರು ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರ್ಧರಿಸಿದೆ.
ಡಿಪಿಡಿಪಿ ಕಾಯ್ದೆಯನ್ನು ಹೇಗೆ ರೂಪಿಸಲಾಯಿತು?
ಪುಟ್ಟಸ್ವಾಮಿ (2017) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗೌಪ್ಯತೆಯ ಹಕ್ಕನ್ನು ಸಂವಿಧಾನದ ವಿಧಿ 21 (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿತು. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು (ವಿಧಿ 19) ಒಳಗೊಂಡಿರುವ ಪ್ರಮುಖ ಹಕ್ಕಾಗಿದೆ. ಈ ತೀರ್ಪಿನಲ್ಲಿ ಸರ್ಕಾರವು ದತ್ತಾಂಶ ಸಂರಕ್ಷಣಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ದತ್ತಾಂಶ ಸಂರಕ್ಷಣಾ ಚೌಕಟ್ಟಿನ ಕುರಿತು ಚರ್ಚಿಸಲು ಮತ್ತು ವರದಿ ನೀಡಲು ಸರ್ಕಾರ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಜುಲೈ 2018ರಲ್ಲಿ ತನ್ನ ವರದಿ ಹಾಗೂ ದತ್ತಾಂಶ ಸಂರಕ್ಷಣೆಯ ಕರಡು ಮಸೂದೆಯನ್ನು ಸಲ್ಲಿಸಿತು. ಬಳಿಕ, 2023ರ ಆಗಸ್ಟ್‌ನಲ್ಲಿ ಸಂಸತ್ತು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆ-2023 ಅನ್ನು ಅಂಗೀಕರಿಸಿತು. ಈ ಕಾಯ್ದೆ ವ್ಯಕ್ತಿಗಳ ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಈ ದತ್ತಾಂಶವನ್ನು ಅವರು ಇತರ ವ್ಯಕ್ತಿಗಳು, ಕಂಪೆನಿಗಳು ಹಾಗೂ ಸರ್ಕಾರಿ ಘಟಕಗಳೊಂದಿಗೆ ಹಂಚಿಕೊಳ್ಳುತ್ತಾರೆ.
ವಿವಾದವೇನು?
ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನಾಗರಿಕರಿಗೆ ಒದಗಿಸಲು 2005ರ ಮಾಹಿತಿ ಹಕ್ಕು (RTI) ಕಾಯ್ದೆ ಜಾರಿಗೆ ತರಲಾಯಿತು.
DPDP ಕಾಯ್ದೆಯ ಸೆಕ್ಷನ್ 44(3) ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಅನ್ನು ತಿದ್ದುಪಡಿ ಮಾಡುತ್ತದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಪ್ರಕಾರ, ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ನೀಡುವ ಮಾಹಿತಿಯಿಂದ ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದರೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರಗಳು ಕಾಯ್ದೆಯ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ನಿರಾಕರಿಸಬಹುದು.
ಆದರೆ, DPDP ಕಾಯ್ದೆಯ ಸೆಕ್ಷನ್ 44(3)ರಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಇತರ ವಿಚಾರಗಳ ಉಲ್ಲೇಖಗಳನ್ನು ತೆಗೆಯಲಾಗಿದೆ. ಇದರ ಫಲವಾಗಿ ವ್ಯಕ್ತಿಯ "ವೈಯಕ್ತಿಕ ಮಾಹಿತಿ"ಯನ್ನು ತಡೆಹಿಡಿಯಲು ಹೆಚ್ಚಿನ ಅವಕಾಶ ಸೃಷ್ಟಿಯಾಗಿದೆ.
ಎನ್‌ಸಿಪಿಆರ್‌ಐ, ವೆಂಕಟೇಶ್ ನಾಯಕ್ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಲ್ಲಿಸಿದ ಅರ್ಜಿಗಳ ಪ್ರಮುಖ ಆಕ್ಷೇಪವೇ 2005ರ ಆರ್‌ಟಿಐ ಕಾಯ್ದೆಗೆ ಮಾಡಲಾದ ಈ ತಿದ್ದುಪಡಿ.
ಈ ತಿದ್ದುಪಡಿಯ ಮೊದಲು, ಸಾರ್ವಜನಿಕ ಅಧಿಕಾರಿಗಳು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ಅದು ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯ ಧಕ್ಕೆ ಉಂಟುಮಾಡುವಂತಿದ್ದರೆ ಮಾತ್ರ ಕಾಯ್ದೆಯಡಿ ವಿನಂತಿಸಿದ ವೈಯಕ್ತಿಕ ಮಾಹಿತಿಯನ್ನು ನಿರಾಕರಿಸಬಹುದಿತ್ತು. ತಿದ್ದುಪಡಿ ಮಾಡದ ಸೆಕ್ಷನ್ 8(1)(j) ಸಾರ್ವಜನಿಕ ಹಿತಾಸಕ್ತಿ ವಿನಾಯಿತಿಯನ್ನು ಒಳಗೊಂಡಿತ್ತು. ಮೂಲ ಆವೃತ್ತಿಯ ಪ್ರಕಾರ, ಮಾಹಿತಿಯನ್ನು ಖಾಸಗಿ ಎಂದು ಪರಿಗಣಿಸಿದ್ದರೂ ಸಹ, ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಅದನ್ನು ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದರು. ವ್ಯಕ್ತಿಯ ಗೌಪ್ಯತೆಯನ್ನು ರಕ್ಷಿಸುವುದಕ್ಕಿಂತ ಮಾಹಿತಿಯನ್ನು ಹಂಚಿಕೊಳ್ಳುವುದು ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚು ಮಹತ್ವದ್ದು ಎಂದು ಅವರು ಭಾವಿಸಿದರೆ, ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿತ್ತು.
ತಿದ್ದುಪಡಿ ಮಾಡಿದ ಸೆಕ್ಷನ್ 8(1)(j) ಈಗ ಯಾವುದೇ "ವೈಯಕ್ತಿಕ ಮಾಹಿತಿ"ಯನ್ನು ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ. ಎನ್‌ಸಿಪಿಆರ್‌ಐ ಪ್ರಕಾರ, ಈ ಬದಲಾವಣೆ ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕು ವ್ಯಕ್ತಿಯ ಗೌಪ್ಯತೆಯಿಗಿಂತ ಹೆಚ್ಚು ಮುಖ್ಯವೆಂದು ನಿರ್ಧರಿಸುವ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳಿಂದ ಕಸಿದುಕೊಳ್ಳುತ್ತದೆ.
ಭ್ರಷ್ಟಾಚಾರದ ತನಿಖೆಗಳು ಅಧಿಕಾರಿಗಳ ಆಸ್ತಿ ಬಹಿರಂಗಪಡಿಸುವಿಕೆ, ಸರ್ಕಾರಿ ಟೆಂಡರ್‌ಗಳ ವಿವರಗಳು ಹಾಗೂ ಆಂತರಿಕ ಕಚೇರಿ ಟಿಪ್ಪಣಿಗಳಂತಹ ದಾಖಲೆಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ದಾಖಲೆಗಳು ಸಾಮಾನ್ಯವಾಗಿ ಕೆಲವು ವೈಯಕ್ತಿಕ ಹೆಸರುಗಳು ಅಥವಾ ವಿವರಗಳನ್ನು ಒಳಗೊಂಡಿರುತ್ತವೆ. "ಸಾರ್ವಜನಿಕ ಹಿತಾಸಕ್ತಿ" ನಿಯಮವನ್ನು ತೆಗೆದುಹಾಕುವುದರಿಂದ, ಮಾಹಿತಿಯು ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಪಟ್ಟಿದ್ದರೂ ಸಹ, ಸರ್ಕಾರವು ಅದನ್ನು "ವೈಯಕ್ತಿಕ" ಎಂದು ಉಲ್ಲೇಖಿಸಿ ಮರೆಮಾಡುವ ಸಾಧ್ಯತೆ ಇದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವಾದಿಸಿದೆ.
ಈ ತಿದ್ದುಪಡಿಯು ಸಂವಿಧಾನ ಉಲ್ಲಂಘನೆ ಎಂದು ಹಲವು ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಪತ್ರಿಕೋದ್ಯಮದ ದೃಷ್ಟಿಕೋನದಿಂದ DPDP ಕಾಯ್ದೆ
ದಿ ರಿಪೋರ್ಟರ್ಸ್ ಕಲೆಕ್ಟಿವ್ ಫೆಬ್ರವರಿ 16ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಜಾಪ್ರಭುತ್ವ, ಪಾರದರ್ಶಕತೆ ಹಾಗೂ ತನಿಖಾ ಪತ್ರಿಕೋದ್ಯಮದ ಮೇಲೆ ನೇರ ದಾಳಿ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್‌ನಲ್ಲಿ DPDP ಕಾಯ್ದೆಯನ್ನು ಪ್ರಶ್ನಿಸಿದ್ದೇವೆ ಎಂದು ತಿಳಿಸಿದೆ.
DPDP ಕಾಯ್ದೆಯು ಪ್ರಸ್ತುತ ರೂಪದಲ್ಲಿ ಪ್ರಜಾಪ್ರಭುತ್ವವನ್ನು ಕುಗ್ಗಿಸುವ ಸಾಧ್ಯತೆ ಹೊಂದಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಡೇಟಾವನ್ನು ಸಂಗ್ರಹಿಸುವ ಅಥವಾ ಪತ್ರಿಕೋದ್ಯಮ ಅಭಿವ್ಯಕ್ತಿಗಳಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಸಂದರ್ಭಗಳಿಗೆ ಯಾವುದೇ ಸ್ಪಷ್ಟ ವಿನಾಯಿತಿ ಇಲ್ಲ. ಈ ವಿನಾಯಿತಿಯ ಕೊರತೆಯಿಂದ DPDP ಕಾಯ್ದೆಯ ರೂಪುರೇಷೆ ಅಸಂವಿಧಾನಿಕ, ಅಸಮಂಜಸ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
"ಸಾರ್ವಜನಿಕ ಹಿತಾಸಕ್ತಿ" ವಿನಾಯಿತಿ ಇಲ್ಲದಿದ್ದರೆ, ಸುದ್ದಿಗಾಗಿ ಡೇಟಾವನ್ನು ಸಂಗ್ರಹಿಸುವ ವರದಿಗಾರನನ್ನೇ ಕಾನೂನು ಉಲ್ಲಂಘಿಸಿದವನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂದೆ ಏನಾಗಬಹುದು?
ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಮಾಹಿತಿ ಹಕ್ಕನ್ನು ವಿಧಿ 19 ಮತ್ತು 21ರ ಅವಿಭಾಜ್ಯ ಅಂಗವೆಂದು ಪರಿಗಣಿಸಿದೆ. ಹಿಂದೆ ಅಧಿಕಾರಿಗಳ ಹಣಕಾಸು ದಾಖಲೆಗಳು ಮತ್ತು ಆಸ್ತಿ ಬಹಿರಂಗಪಡಿಸುವಿಕೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದರೆ RTI ಕಾಯ್ದೆಯಡಿ ಹಂಚಿಕೊಳ್ಳಲಾಗುತ್ತಿತ್ತು. ಇದು ಭ್ರಷ್ಟಾಚಾರ ಬಹಿರಂಗಪಡಿಸಲು ಪ್ರಮುಖ ಸಾಧನವಾಗಿತ್ತು.
ಆದರೆ ಪ್ರಸ್ತುತ ತಿದ್ದುಪಡಿ ಅಧಿಕಾರಿಗಳಿಗೆ ಈ ದಾಖಲೆಗಳನ್ನು "ವೈಯಕ್ತಿಕ ಮಾಹಿತಿ" ಎಂದು ಉಲ್ಲೇಖಿಸಿ ಮರೆಮಾಡುವ ಅವಕಾಶ ನೀಡುತ್ತದೆ.
"ವೈಯಕ್ತಿಕ ಮಾಹಿತಿ"ಯ ಅರ್ಥವನ್ನು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನ ಈ ಸಂಘರ್ಷವನ್ನು ಪರಿಹರಿಸಲು ಆರಂಭಿಕ ಹಂತವಾಗಬಹುದು. ಆದರೆ ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ DPDP ಕಾಯ್ದೆಯಿಂದ ಮಾಡಲಾದ ಬದಲಾವಣೆಗಳನ್ನು ರದ್ದುಗೊಳಿಸಿ, ಸೆಕ್ಷನ್ 8(1)(j) ಅನ್ನು ಅದರ ಮೂಲ ರೂಪಕ್ಕೆ ಹಿಂತಿರುಗಿಸುವುದು.
ಮೂಲ ನಿಯಮವು ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕು ಮತ್ತು ಅಧಿಕಾರಿಗಳ ಗೌಪ್ಯತೆಯ ನಡುವೆ ಸಮತೋಲನ ಸಾಧಿಸುವಂತೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿತ್ತು. ಅದನ್ನು ಮರುಸ್ಥಾಪಿಸುವುದರಿಂದ ಗೌಪ್ಯತೆ ರಕ್ಷಣೆ ಹಾಗೂ ಪಾರದರ್ಶಕತೆ - ಎರಡನ್ನೂ ಸಮತೋಲನದಲ್ಲಿ ಉಳಿಸಬಹುದು.

