ಸೋಲ್: ಅಮೆರಿಕದ ನೆಲವನ್ನು ಗುರಿಯಾಗಿಸುವ ಸಾಮರ್ಥ್ಯದ ಕ್ಷಿಪಣಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಎಂಜಿನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಎಂಜಿನ್ ಪರೀಕ್ಷೆ ವೀಕ್ಷಿಸಿದ್ದು, 'ದೇಶದ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲು' ಎಂದು ಶ್ಲಾಘಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಕೊರಿಯನ್ ಸೆಂಟ್ರಲ್ ನ್ಯೂಸ್ ಭಾನುವಾರ ವರದಿ ಮಾಡಿದೆ.
ಇದೀಗ ಪರೀಕ್ಷಿಸಿರುವ ಎಂಜಿನ್‌ನ ಗರಿಷ್ಠ ನೂಕುಬಲ (ಥ್ರಸ್ಟ್) 2,500 ಕಿಲೊ ಟನ್ ಆಗಿದೆ ಎಂದು ವರದಿ ತಿಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಕೊರಿಯಾ ಇದೇ ರೀತಿಯ ಎಂಜಿನ್ ಪರೀಕ್ಷೆ ನಡೆಸಿದ್ದು, ಅದರ ಗರಿಷ್ಠ ಥ್ರಸ್ಟ್ 1,970 ಕಿಲೊ ಟನ್ ಆಗಿತ್ತು.
ಅಮೆರಿಕದ ನೆಲ ತಲುಪಬಲ್ಲ ಕ್ಷಿಪಣಿ ಅಭಿವೃದ್ಧಿಪಡಿಸುವ ಗುರಿಯನ್ನು ಉತ್ತರ ಕೊರಿಯಾ ಹೊಂದಿದ್ದು, ಆ ಯೋಜನೆಯ ಭಾಗವಾಗಿ ಈ ಪರೀಕ್ಷೆ ನಡೆದಿದೆ. ಎಂಜಿನ್ ಪರೀಕ್ಷೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದನ್ನು ವರದಿಯು ಬಹಿರಂಗಪಡಿಸಿಲ್ಲ.



