ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೇ ಜಾಗತಿಕ ವಾಣಿಜ್ಯಕ್ಕೆ ಅತ್ಯಂತ ಪ್ರಮುಖವಾದ ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಜಲಮಾರ್ಗವನ್ನು ದಾಟಲು ಸುಮಾರು 1,000 ಹಡಗುಗಳು ಕಾಯುತ್ತಿದ್ದು, ಇವುಗಳಲ್ಲಿ 200ಕ್ಕೂ ಹೆಚ್ಚು ತೈಲ ಟ್ಯಾಂಕರ್ ಗಳಿರುವುದು ಜಾಗತಿಕ ಇಂಧನ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ.
ತೈಲ ಸರಬರಾಜಿನ ಅಡಚಣೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗುತ್ತಿದ್ದು, ಅನೇಕ ದೇಶಗಳಲ್ಲಿ ಇಂಧನ ವೆಚ್ಚಗಳು ಹೆಚ್ಚಾಗುತ್ತಿವೆ. ಇರಾನ್ ಮಿಲಿಟರಿಯ ಬಿಗಿ ನಿಯಂತ್ರಣ ಹಾರ್ಮುಝ್ ಜಲಸಂಧಿಯ ಮೇಲಿರುವುದರಿಂದ ತೈಲ ಟ್ಯಾಂಕರ್ ಗಳು ಈ ದಾರಿಯಲ್ಲಿ ಸಾಗಲು ಹಿಂದೇಟು ಹಾಕುತ್ತಿವೆ.
ಜಲಸಂಧಿಯ ಪ್ರವೇಶದ್ವಾರವನ್ನು ತಲುಪಲು ಅಥವಾ ಅದನ್ನು ದಾಟಲು ಯತ್ನಿಸುವ ಹಡಗುಗಳಿಗೆ ಇರಾನ್ ಮಿಲಿಟರಿಯಿಂದ ನಿರಂತರ ಬೆದರಿಕೆಗಳು ಎದುರಾಗುತ್ತಿವೆ. ಕೆಲವು ದಿನಗಳ ಹಿಂದೆ ಒಂದು ಹಡಗು ಈ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿರುವುದು ಕಂಡುಬಂದಿತ್ತು. ಆ ದಾಳಿ ಇರಾನ್ ನಡೆಸಿದೆಯೇ ಎಂಬುದು ಸ್ಪಷ್ಟವಾಗದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಇರಾನ್ ನಡೆಸಿರಬಹುದು ಎನ್ನಲಾಗಿದೆ.
ಈ ನಡುವೆ, ಅಮೆರಿಕ ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ಹಡಗುಗಳಿಗೆ ಜಲಮಾರ್ಗವನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂದು ಇರಾನ್ ಘೋಷಿಸಿದೆ. ಆದರೆ ಅಮರಿಕಕ್ಕೆ ಸಂಬಂಧಿಸದ ಹಡಗುಗಳೂ ದಾಳಿಗೆ ಗುರಿಯಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಇತ್ತೀಚೆಗೆ ಥಾಯ್ಲೆಂಡ್ ಧ್ವಜ ಹೊಂದಿದ್ದ ಒಂದು ಹಡಗು ಜಲಸಂಧಿಯನ್ನು ದಾಟಲು ಯತ್ನಿಸಿದಾಗ ಅದರ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗುರಿಯಾಗಿಸಲಾಗಿತ್ತು. ದಾಳಿಯಿಂದ ಹಡಗು ಗಂಭೀರವಾಗಿ ಹಾನಿಗೊಂಡಿದ್ದು, ಸುಮಾರು 20 ಸಿಬ್ಬಂದಿಯನ್ನು ಒಮಾನಿನ ನೌಕಾಪಡೆ ರಕ್ಷಿಸಿದೆ. ಇನ್ನೂ ಮೂವರು ಸಿಬ್ಬಂದಿ ಸಮುದ್ರದಲ್ಲಿ ಕಾಣೆಯಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಬೆಳವಣಿಗೆಗಳು ಜಾಗತಿಕ ವಾಣಿಜ್ಯ ಮಾರ್ಗಗಳ ಭದ್ರತೆ ಹಾಗೂ ಇಂಧನ ಸರಬರಾಜಿನ ಸ್ಥಿರತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿವೆ.

