ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಮುಂದಿಟ್ಟ 'ಬಹಿರಂಗ ಚರ್ಚೆ'ಯ ಸವಾಲನ್ನು ಸ್ವೀಕರಿಸಿದ್ದು, ಚುನಾವಣೆಗೆ ಮುನ್ನ ರಾಜಕೀಯ ಕಾವು ಏರುವಂತೆ ಮಾಡಿದ್ದಾರೆ.
'ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಬಹಿರಂಗ ಚರ್ಚೆಗೆ ಸಿದ್ಧ' ಎಂದು ಸತೀಶನ್ ಅವರು ಭಾನುವಾರ ಸವಾಲು ಹಾಕಿದ್ದರು.
ಸೋಮವಾರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸರ್ಕಾರದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಪೋಸ್ಟ್ ಮಾಡಿರುವ ಪಿಣರಾಯಿ, 'ಇಲ್ಲಿ ಪಟ್ಟಿ ಮಾಡಲಾದ ಸಾಧನೆಗಳ ಆಧಾರದ ಮೇಲೆ ಚರ್ಚೆಗೆ ಸಿದ್ಧ' ಎಂದಿದ್ದಾರೆ.
ಪಿಣರಾಯಿ ಅವರ ಪೋಸ್ಟ್‌ಗೆ ತಕ್ಷಣ ಪ್ರತಿಕ್ರಿಯಿಸಿರುವ ಸತೀಶನ್, 'ಮುಖ್ಯಮಂತ್ರಿ ಅವರು ತಿಳಿಸುವ ಸಮಯ ಮತ್ತು ಸ್ಥಳದಲ್ಲಿ ಚರ್ಚೆಯಲ್ಲಿ ಭಾಗವಹಿಸಲು ನಾನೂ ಸಿದ್ಧ' ಎಂದಿದ್ದಾರೆ.
'ಈಗ ಮುಖ್ಯಮಂತ್ರಿ ಅವರು ಚರ್ಚೆಗೆ ಸಿದ್ಧ ಎಂದು ಹೇಳಿರುವುದರಿಂದ ಸ್ಥಳ ಮತ್ತು ಸಮಯವನ್ನು ಅವರೇ ನಿರ್ಧರಿಸಲಿ. ಅದಕ್ಕೆ ತಕ್ಕಂತೆ ನಾನು ಚರ್ಚೆಯಲ್ಲಿ ಪಾಲ್ಗೊಳ್ಳುವೆ. ಉಳಿದದ್ದನ್ನು ಜನರೇ ನಿರ್ಧರಿಸಲಿ' ಎಂದು ಸತೀಶನ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

