ಸಮಾಲಖಾ: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಸಮಯದಲ್ಲಿ, 'ವಿಶ್ವದಲ್ಲಿ ಶಾಂತಿ ನೆಲಸಬೇಕು ಎಂದು ನಾವು ಬಯಸುತ್ತೇವೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕರೆ ನೀಡಿದೆ. ರಾಷ್ಟ್ರದ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದೂ ಹೇಳಿದೆ.
'ಹಲವು ಕಾರಣಗಳಿಂದ ಯುದ್ಧಗಳು ನಡೆಯುತ್ತವೆ. ಈ ಯುದ್ಧವು ಸಾಧ್ಯವಾದಷ್ಟೂ ಬೇಗ ನಿಲ್ಲಬೇಕು. ಜನಜೀವನವು ಸಹಜಸ್ಥಿತಿಗೆ ಮರಳಬೇಕು' ಎಂದು ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಹರಿಯಾಣದ ಸಮಾಲಖಾದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಉನ್ನತ ಸಮಿತಿ 'ಅಖಿಲ ಭಾರತೀಯ ಪ್ರತಿನಿಧಿ ಸಭಾ'ದ (ಎಬಿಪಿಎಸ್) ಮೂರು ದಿನಗಳ ಸಮಾವೇಶದ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
'ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿ ಯಾವುದು ಮುಖ್ಯವೋ ಅದನ್ನೇ ಭಾರತ ಸರ್ಕಾರ ಮಾಡುತ್ತಿದೆ. ದೇಶದ ಪ್ರಜೆಗಳಿಗಾಗಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ' ಎಂದರು.

