ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಮೊದಲ ಪೂರಕ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ಬೂತ್‌ನ ಪಟ್ಟಿಗಳನ್ನು ರಾತ್ರಿ 11.55ರ ಸುಮಾರಿಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರುವರಿ 28ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು 60 ಲಕ್ಷ ಹೆಸರುಗಳನ್ನು ತಡೆಹಿಡಿಯಲಾಗಿತ್ತು. ಈ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ತೆಗೆದುಹಾಕಬೇಕೇ ಎಂಬುದನ್ನು ನಿರ್ಧರಿಸಲು 705 ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಪೂರಕ ಪಟ್ಟಿಯಲ್ಲಿ ಈ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಅಂತಿಮಗೊಳಿಸಿದ ಮತದಾರರ ಹೆಸರುಗಳಿವೆ.
ಇಲ್ಲಿಯವರೆಗೆ ಸುಮಾರು 29 ಲಕ್ಷ ಹೆಸರುಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಮನೋಜ್ ಕುಮಾರ್ ಅಗರ್ವಾಲ್ ಸೋಮವಾರ ಸಂಜೆ ಹೇಳಿದ್ದರು.
ಮೊದಲ ಪೂರಕ ಪಟ್ಟಿಯಲ್ಲಿ ಈ ಪೈಕಿ ಎಷ್ಟು ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ. ಎಷ್ಟು ಹೆಸರುಗಳನ್ನು ಅಳಿಸಲಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪಟ್ಟಿ ಲಭ್ಯವಾಗಿದ್ದರೂ, ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ವರದಿ ಮಾಡಿದ್ದಾರೆ.
ತಡೆ ಹಿಡಿಯಲಾದ ಹೆಸರುಗಳನ್ನು ವಿಚಾರಣೆ ಮುಗಿದಂತೆ ಮುಂದಿನ ಪೂರಕ ಪಟ್ಟಿಗಳಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರಕ ಪಟ್ಟಿಯು ಇಸಿಐ ನೆಟ್ ಮೊಬೈಲ್ ಅಪ್ಲಿಕೇಶನ್ ಜೊತೆಗೆ ಸಿಇಒ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ಗಳು ಸೇರಿದಂತೆ ಬಹು ಅಧಿಕೃತ ವೇದಿಕೆಗಳಲ್ಲಿ ಲಭ್ಯವಿರುತ್ತದೆ ಎಂದು ಅಗರ್ವಾಲ್ ಹೇಳಿದ್ದರು.
ಪೂರಕ ಮತದಾರರ ಪಟ್ಟಿಯ ಪ್ರಕಟಣೆಯ ದೃಷ್ಟಿಯಿಂದ ರಾಜ್ಯದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಎಣಿಕೆ ನಡೆಯಲಿದೆ.

