ವಾರಾಣಸಿ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಈ ನಡುವೆ ವಾರಾಣಸಿಯ ನೇಕಾರರು ಕ್ರಿಕೆಟ್ ವಿಷಯಾಧಾರಿತ ವಿಶೇಷ 15 ಬನಾರಸಿ ಸೀರೆಗಳನ್ನು ಸಿದ್ಧಪಡಿಸಿದ್ದಾರೆ. ಪಂದ್ಯದ ಬಳಿಕ ಈ ಸೀರೆಗಳನ್ನು ಭಾರತೀಯ ತಂಡದ ಆಟಗಾರರಿಗೆ ಉಡುಗೊರೆಯಾಗಿ ಕಳುಹಿಸಿಕೊಡಲಾಗುತ್ತಿದೆ.
ವಿಶ್ವಕಪ್ ಇತಿಹಾಸ ಅನಾವರಣ
ಭಾರತ ಈವರೆಗೆ ಗೆದ್ದಿರುವ ಎಲ್ಲಾ ವಿಶ್ವಕಪ್ ಟ್ರೋಫಿಗಳ ಚಿತ್ರ ಮತ್ತು ಆಯಾ ವರ್ಷಗಳನ್ನು ಒಳಗೊಂಡಂತೆ ಈ ಸೀರೆಗಳನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಜತೆಗೆ ಈ ವರ್ಷದ ಟಿ20 ವಿಶ್ವಕಪ್ ಟ್ರೋಫಿಯ ವಿನ್ಯಾಸವನ್ನು ಈ ಸೀರೆಗಳ ಮೇಲೆ ನೆಯ್ಯಲಾಗಿದೆ ಎಂದು ಲಘು ಉದ್ಯೋಗ ಭಾರತಿ ಕಾಶಿ ಪ್ರಾಂತ್ಯದ (Laghu Udyog Bharati Kashi province) ಕಾರ್ಯದರ್ಶಿ ಸರ್ವೇಶ್ ಶ್ರೀವಾಸ್ತವ ಹೇಳಿದ್ದಾರೆ.
ಅಲ್ಲದೇ ಸೀರೆಯ ಬಾರ್ಡರ್‌ನಲ್ಲಿ (ಅಂಚು) ಬ್ಯಾಟ್ ಮತ್ತು ಬಾಲ್ ಸೇರಿದಂತೆ ಕ್ರಿಕೆಟ್‌ಗೆ ಸಂಬಂಧಿಸಿದ ಚಿತ್ರಗಳನ್ನು ಸಾಂಪ್ರದಾಯಿಕ ಬನಾರಸಿ ಮಾದರಿಯಲ್ಲಿ ನೆಯ್ಯಲಾಗಿದೆ.
ಪ್ರತಿಯೊಂದು ಸೀರೆಯನ್ನು ಅಲಂಕಾರಿಕ ಪೆಟ್ಟಿಗೆಗಳಲ್ಲಿ ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗಿದೆ. ವಿವಾಹಿತ ಆಟಗಾರರು ತಮ್ಮ ಪತ್ನಿಯರೊಂದಿಗೆ ಇರುವ ಛಾಯಾಚಿತ್ರಗಳನ್ನು ಅವರಿಗಾಗಿ ಮೀಸಲಾದ ಸೀರೆಗಳಿಗೆ ಲಗತ್ತಿಸಲಾಗಿದೆ. ಅವಿವಾಹಿತ ಆಟಗಾರರಿಗೆ ಅವರ ಭಾವಚಿತ್ರ ಹೊಂದಿರುವ ಅಲಂಕೃತ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾಗಿದೆ.
ಪ್ರತಿ ಸೀರೆಯನ್ನು ತಯಾರಿಸಲು ₹25,000ರಿಂದ ₹30,000ವೆಚ್ಚವಾಗಿದೆ. ನುರಿತ ಕುಶಲಕರ್ಮಿಗಳು ಒಂದು ಸೀರೆಯನ್ನು ತಯಾರಿಸಲು ಸುಮಾರು ಒಂದೂವರೆ ತಿಂಗಳು ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾಗರರ ಮನೋಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ ಬನಾರಸಿ ಸೀರೆಗಳ ಕಲೆಯನ್ನು ದೇಶ ಮತ್ತು ಜಾಗತಿಕ ಮನ್ನಣೆ ನೀಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದೂ ಶ್ರೀವಾಸ್ತವ ಹೇಳಿದ್ದಾರೆ.
ಸೀರೆಯ ವಿಶೇಷತೆಗಳೇನು?
ವಿನ್ಯಾಸ: ಸೀರೆಯ ಬಾರ್ಡರ್‌ನಲ್ಲಿ ಬ್ಯಾಟ್ ಮತ್ತು ಬಾಲ್ ಚಿತ್ರಗಳ ವಿನ್ಯಾಸವಿದ್ದು, ಪಲ್ಲುವಿನಲ್ಲಿ ವಿಶ್ವಕಪ್ ಟ್ರೋಫಿಗಳ ಚಿತ್ರಣವಿದೆ.
ಉದ್ದೇಶ: ಟೀಮ್ ಇಂಡಿಯಾದ ಮನೋಬಲ ಹೆಚ್ಚಿಸುವುದರ ಜೊತೆಗೆ ಬನಾರಸಿ ಸೀರೆಗಳ ಕಲೆಯನ್ನು ದೇಶ ಮತ್ತು ಜಾಗತಿಕ ಮನ್ನಣೆ ನೀಡುವುದು.
ತಯಾರಿಕೆ: 15 ವಿಶೇಷ ಸೀರೆಗಳನ್ನು ಕೈಮಗ್ಗದಲ್ಲಿಯೇ (Handloom) ತಯಾರಿಸಲಾಗಿದೆ.
ಈ ವಿಶಿಷ್ಟ ಸೀರೆಗಳು ಸಾಂಪ್ರದಾಯಿಕ ಬನಾರಸಿ ಕಲೆ ಮತ್ತು ಕ್ರೀಡೆಯ ಸಮ್ಮಿಲನವನ್ನು ಪ್ರದರ್ಶಿಸಲಿವೆ.
ಗಂಗಾ ದ್ವಾರದಲ್ಲಿ ಪ್ರಾರ್ಥನೆ
ಟೀಂ ಇಂಡಿಯಾದ ಗೆಲುವಿಗಾಗಿ ಕಾಶಿ ವಿಶ್ವನಾಥ ಧಾಮದ ಗಂಗಾ ದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ನಮಾಮಿ ಗಂಗೆಯ ಕಾಶಿ ಸಂಘಟನೆಯ ಸದಸ್ಯರು ಟೀಮ್ ಇಂಡಿಯಾ ಆಟಗಾರರ ಚಿತ್ರಗಳು, ಬ್ಯಾಟ್ ಮತ್ತು ರಾಷ್ಟ್ರಧ್ವಜದೊಂದಿಗೆ ಗಂಗಾ ನದಿಗೆ ಆರತಿ ಸಲ್ಲಿಸಿದ್ದಾರೆ ಎಂದು ಸಂಘಟನೆಯ ಸಂಯೋಜಕ ರಾಜೇಶ್ ಶುಕ್ಲಾ ತಿಳಿಸಿದ್ದಾರೆ.
ಇಂದು (ಭಾನುವಾರ) ಸಂಜೆ 7ಕ್ಕೆ ಅಹಮದಾಬಾದ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟಿ 20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

