ಟೆಹರಾನ್: ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡುಗುಗಳಿಂದ ಕ್ರಿಪ್ಟೊ ಕರೆನ್ಸಿ ಅಥವಾ ಚೀನಾ ಕರೆನ್ಸಿ ಯುವಾನ್ ಮೂಲಕ ಟೋಲ್ ಕಟ್ಟುವಂತೆ ಇರಾನ್ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.
ಅಲ್ಲದೆ, ಇರಾನ್ ಅಧಿಕಾರಿಗಳಿಂದ ಅನುಮೋದನೆ ಪಡೆಯದ ಕೆಲ ಹಡಗುಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದೂ ತಿಳಿದುಬಂದಿದೆ.
ಕದನ ವಿರಾಮ ಹಿನ್ನೆಲೆಯಲ್ಲಿ ಈ ವಾರ ಕೆಲ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ. ಅಲ್ಲದೇ, ಮಿತ್ರರಾಷ್ಟ್ರಗಳ ಹಡಗುಗಳನ್ನು ಸರಾಗವಾಗಿ ಕಳುಹಿಸುತ್ತಿದ್ದು, ಶತ್ರು ರಾಷ್ಟ್ರಗಳ ಹಡಗುಗಳ ಬಳಿ ಬಹಳಷ್ಟು ದಾಖಲೆ ಪತ್ರಗಳ ಪರಿಶೀಲನೆ ನಡೆಯುತ್ತಿದೆ ಎಮದು ವರದಿ ತಿಳಿಸಿದೆ.
ಇರಾನ್ ಅಧಿಕಾರಿಗಳು ಏನು ಕೇಳುತ್ತಿದ್ದಾರೆ?
* ಹೊರ್ಮುಜ್ ತಲುಪುವ ಮುನ್ನವೇ ಇಮೇಲ್ ಮೂಲಕ ಕಾರ್ಗೊ ಮತ್ತು ಹಡಗಿನ ಮಾಹಿತಿ
* ಇರಾನ್ ಅದಿಕಾರಿಗಳಿಂದ ಸಂಚಾರ ಅನುಮತಿ
* ಮುಂಗಡವಾಗಿ ಬಿಟ್ಕಾಯಿನ್ ಅಥವಾ ಚೈನೀಸ್ ಯುವಾನ್ ಮೂಲಕ ನಿಗದಿಪಡಿಸಲಾದ ಟೋಲ್ ಪಾವತಿ
* ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವೆ ಇರಾನ್ನ ಕರಾವಳಿಯ ಹತ್ತಿರ ಉತ್ತರ ಕಾರಿಡಾರ್ ಬಳಕೆ
ತೈಲ ಸಾಗಣೆ ಮಾಡುವ ಹಡಗುಗಳಿಗೆ ಪ್ರತಿ ಬ್ಯಾರಲ್ಗೆ 1 ಡಾಲರ್ ಚಾರ್ಜ್ ಮಾಡಲಾಗುತ್ತದೆ. ಖಾಲಿ ಹಡಗುಗಳು ಉಚಿತವಾಗಿ ಸಂಚರಿಸಬಹುದಾಗಿದೆ ಎಂದು ಇರಾನ್ನ ಪ್ರತಿನಿಧಿಯೊಬ್ಬರು ಫೈನಾನ್ಶಿಯಲ್ ಟೈಮ್ಸ್ಗೆ ತಿಳಿಸಿದ್ದಾರೆ. ದೊಡ್ಡ ದೊಡ್ಡ ಟ್ಯಾಂಕರ್ಗಳ ಮೇಲೆ ಮಿಲಿಯನ್ ಡಾಲರ್ವರೆಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಸಹ ಯುವಾನ್ ಕರೆನ್ಸಿಯಲ್ಲೇ ಪಾವತಿಸಬೇಕಿದೆ.
ಕ್ರಿಪ್ಟೊ ಮತ್ತು ಯುವಾನ್ ಕರೆನ್ಸಿ ಏಕೆ?
ಇರಾನ್ ದೇಶವು ಅಮೆರಿಕ ಮತ್ತು ಯುರೋಪ್ ದೇಶಗಳ ನಿರ್ಬಂಧಗಳಿಂದ ಬಳಲುತ್ತಿದೆ. ಡಾಲರ್ ಪಾವತಿ ಕಷ್ಟಕರವಾಗಿದ್ದು, ಕ್ರಿಪ್ಟೊ ಮತ್ತು ಯುವಾನ್ ಬಳಕೆಯು ಉತ್ತಮವಾದದ್ದಾಗಿದೆ.
ಕೆಲವು ಪ್ರಕರಣಗಳಲ್ಲಿ ಈಗಾಗಲೇ ಯುವಾನ್ ಬಳಕೆ ಆರಂಭಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಲ್ಫ್ ಕಣವೆಯು ಕಾರ್ ಪಾರ್ಕಿಂಗ್ನಂತಾಗಿದ್ದು, ಹಲವರು ಹೊರ್ಮುಜ್ ಪ್ರವೇಶಕ್ಕೂ ಮುನ್ನ ಸ್ಪಷ್ಟನೆಗೆ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

