ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ವೇಳೆ ಮತದಾನ ನಡೆದಿರುವ 152 ಕ್ಷೇತ್ರಗಳ ಪೈಕಿ 125ರಲ್ಲಿ ಗೆಲುವು ಸಾಧಿಸುವುದಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭವಿಷ್ಯ ನುಡಿದಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ನಿಗದಿಯಾಗಿದೆ.
ಗುರುವಾರ (ಏಪ್ರಿಲ್ 23ರಂದು) ಮೊದಲ ಹಂತ ಪೂರ್ಣಗೊಂಡಿದೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಅಧಿಕಾರಿ, ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ತಮ್ಮ ಪಕ್ಷವು ಅಭೂತಪೂರ್ವ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವುದೇ ಲೋಪವಿಲ್ಲದೆ ಮತದಾನ ಪ್ರಕ್ರಿಯೆ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಅವರು, 'ಮೊದಲ ಹಂತವೊಂದರಲ್ಲೇ ಬಿಜೆಪಿಯು 125 ಸ್ಥಾನಗಳನ್ನು ಗೆಲ್ಲಲಿದೆ' ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರ ಮತಗಳು ಕ್ರೋಢೀಕರಣಗೊಳ್ಳಲಿವೆ. ಹಿಂದೂಗಳು ಗಣನೀಯವಾಗಿ - ಸುಮಾರು ಶೇ 85ಕ್ಕೂ ಹೆಚ್ಚು ಬಿಜೆಪಿಗೆ ಮತ ನೀಡಿರುವುದು ಫಲಿತಾಂಶದಲ್ಲಿ ಗೋಚರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತ ಪಕ್ಷದ ಕಾರ್ಯಕರ್ತರು ಒಡ್ಡುತ್ತಿರುವ ಬೆದರಿಕೆಗಳನ್ನು ಎದುರಿಸುವುದು ಎರಡನೇ ಹಂತದ ಮತದಾನದ ವೇಳೆಗೆ ನಮ್ಮ ಎದುರು ಇರುವ ಪ್ರಮುಖ ಸವಾಲು ಎಂದೂ ಹೇಳಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮೊದಲ ಹಂತದಲ್ಲಿ ಮತದಾನ ನಡೆದ 16 ಜಿಲ್ಲೆಗಳಲ್ಲಿ 1.75 ಕೋಟಿ ಮಹಿಳೆಯರು, 465 ತೃತೀಯ ಲಿಂಗಿಗಳು ಸೇರಿದಂತೆ 3.60 ಕೋಟಿಗೂ ಹೆಚ್ಚು ಅರ್ಹ ಮತದಾರರು ಇದ್ದರು. ಈ ಪೈಕಿ ಶೇ 91.78ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 2.5 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ರಾಜ್ಯದಲ್ಲಿ ಎರಡನೇ ಹಂತದ ಮತದಾನವು ಏಪ್ರಿಲ್ 29ರಂದು ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್ ಪಕ್ಷವು ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಆದರೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

