ಕಾಸರಗೋಡು: ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಮೇ 7ರಿಂದ 13ರ ವರೆಗೆ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. 7ರಂದು ಪುತ್ತೂರಿನಿಂದ ಕೋಯಿಕ್ಕೋಡಿಗೆ ತೆರಳುವ ಶ್ರೀಗಳು 8ಮತ್ತು 9ರಂದು ಕೋಯಿಕ್ಕೋಡು ಜಿಲ್ಲೆಯಲ್ಲಿ ಮೊಕ್ಕಾಂ ಹೂಡುವರು.
10ರಿಂದ ಕಾಸರಗೋಡು ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. 10ರಂದು ಸಂಜೆ ಎಡನೀರು ಮಠಕ್ಕೆ ಚಿತ್ತೈಸಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಮಠದಲ್ಲಿ ಮೊಕ್ಕಾಂ ಹೂಡುವರು.
11ರಂದು ಶ್ರೀ ಎಡನೀರು ಮಠದಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಿರ್ಗಮಿಸುವರು. ಸಂಜೆ 6.30ಕ್ಕೆ ಮಲ್ಲ ದೇಗುಲದಲ್ಲಿ ಶೃಂಗೇರಿಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, ಶ್ರೀದೇವೀ ದರ್ಶನ, ಧೂಳೀಪಾದಪೂಜೆ, ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ ನಡೆಯುವುದು.
12ರಂದು ಬೆಳಗ್ಗೆ 11ಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯಸಾನ್ನಿಧ್ಯದಲ್ಲಿ 'ಶತಚಂಡಿಕಾ ಯಾಗದ ಪೂರ್ಣಾಹುತಿ', ಗುರುದರ್ಶನ, ಪಾದುಕಾಪೂಜೆ, ಭಿಕ್ಷಾವಂದನೆ, ಫಲಮಂತ್ರಾಕ್ಷತೆ, ರಾತ್ರಿ ಗುರುದರ್ಶನ, ಪಾದುಕಾಪೂಜೆ, ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ ನಡೆಯುವುದು.
13ರಂದು ಬೆಳಗ್ಗೆ 9.30ಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅಮೃತಹಸ್ತಗಳಿಂದ ಶ್ರೀ ಸತ್ಯನಾರಾಯಣ ದೇವರಿಗೆ ಲಕ್ಷಾರ್ಚನಾ ಕಲಶಾಭಿಷೇಕ,
ಅನುಗ್ರಹ ಭಾಷಣ, ಶ್ರೀಗುರುದರ್ಶನ, ಪಾದುಕಾಪೂಜೆ, ಗುರುಕಾಣಿಕೆ, ಫಲಮಂತ್ರಾಕ್ಷತೆ ನಡೆಯುವುದು. 13ರಂದು ಸಂಜೆ ಶ್ರೀಗಳು ಸುಳ್ಯಕ್ಕೆ ನಿರ್ಗಮಿಸಲಿರುವರು.



