ಕಣ್ಣೂರು: ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ತನ್ನ ಐದು ವರ್ಷಗಳ ಆಡಳಿತಾವಧಿಯ ಪ್ರಗತಿ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಶೇ 97ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, '2021ರಲ್ಲಿ ನೀಡಿದ್ದ ಚುನಾವಣಾ ಭರವಸೆಗಳಲ್ಲಿ ಬಹುತೇಕ ಈಡೇರಿಸಲಾಗಿದೆ.
ಇದನ್ನು ತಿಳಿದುಕೊಳ್ಳುವುದು ಜನರ ಹಕ್ಕಾಗಿರುವ ಕಾರಣಕ್ಕೆ ಪ್ರಕಟಿಸಿದ್ದೇವೆ' ಎಂದು ತಿಳಿಸಿದರು.
ಎಲ್‌ಡಿಎಫ್ ಸರ್ಕಾರವು 2016ರಿಂದ ವಾರ್ಷಿಕ ಪ್ರಗತಿ ವರದಿಯನ್ನು ಜನರ ಮುಂದಿಡುತ್ತಾ ಬಂದಿದೆ. 2021ರಲ್ಲಿ ಅಧಿಕಾರ ವಹಿಸಿಕೊಂಡ ಸರ್ಕಾರ ಐದನೇ ವರ್ಷದ ಪ್ರಗತಿ ವರದಿಯನ್ನು ಈಗ ಜನರ ಮುಂದಿಟ್ಟಿದೆ ಎಂದು ಹೇಳಿದರು.
2021ರ ಚುನಾವಣಾ ಪ್ರಣಾಳಿಕೆಯಲ್ಲಿ 900 ಭರವಸೆಗಳನ್ನು ನೀಡಲಾಗಿತ್ತು. ಇವುಗಳಲ್ಲಿ ಶೇ 97ರಷ್ಟು ಈಗಾಗಲೇ ಈಡೇರಿವೆ ಅಥವಾ ಅನುಷ್ಠಾನದ ಪರಿಣಾಮಕಾರಿ ಹಂತ ತಲುಪಿದೆ ಎಂದು ಪಿಣರಾಯಿ ವಿವರಿಸಿದರು.

