ನವದೆಹಲಿ: ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ಅಧಿಕೃತ ನೋಟಿಸ್ ಗಳ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ನೆರವಾಗಲು ಸಿಬಿಐ ಕೃತಕ ಬುದ್ಧಿಮತ್ತೆಯ(AI ) ಚಾಟ್ ಬಾಟ್ ಅನ್ನು ಸೋಮವಾರ ಪ್ರಾರಂಭಿಸಲಿದೆ.
ಕೊಹ್ಲಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು 'ಅಭಯ್' ಎಂಬ ಚಾಟ್ ಬಾಟ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಜೆಐ ''ಸೈಬರ್ ಅಪರಾಧದ ಸವಾಲುಗಳು - ಪೊಲೀಸ್ ಹಾಗೂ ನ್ಯಾಯಾಂಗದ ಪಾತ್ರ'' ಕುರಿತು ಉಪನ್ಯಾಸ ನೀಡಲಿದ್ದಾರೆ. ಅವರು ಶ್ರೇಷ್ಠ ಸೇವೆಗಾಗಿ 24 ಪದಕಗಳನ್ನು ಕೂಡ ಪ್ರಧಾನ ಮಾಡಲಿದ್ದಾರೆ.
AI ಆಧಾರಿತ ನೋಟಿಸ್ ಪರಿಶೀಲನಾ ಚಾಟ್ ಬಾಟ್ 'ಅಭಯ್' ಸಿಬಿಐ ಜಾರಿಗೊಳಿಸಿದೆ ಎಂದು ಹೇಳಲಾದ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಿದೆ. ಡಿಜಿಟಲ್ ಅರೆಸ್ಟ್ ವಂಚನೆಗಳ ಸಂದರ್ಭ ಇದು ನಾಗರಿಕರಿಗೆ ಅತ್ಯಂತ ಅಗತ್ಯವಾದ ಸಾಧನವಾಗಲಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ವಂಚಕರು ಸಿಬಿಐ ಅಧಿಕಾರಿಗಳಂತೆ ನಟಿಸಿ, ಸಂಸ್ಥೆಯಿಂದ ನೀಡಿರುವುದೆಂದು ಹೇಳಲಾದ ಅಸ್ತಿತ್ವದಲ್ಲಿಲ್ಲದ ಪ್ರಕರಣಗಳಿಗೆ ಸಂಬಂಧಿಸಿದ ನಕಲಿ ನೋಟಿಸ್ ಗಳನ್ನು ತೋರಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ, ನಿಯಂತ್ರಣದಲ್ಲಿಟ್ಟುಕೊಂಡು ನಂತರ ಅವರಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

