ತಿರುವನಂತಪುರಂ : ಅಬುಧಾಬಿಯಿಂದ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ಏರ್ ಅರೇಬಿಯಾ ವಿಮಾನ ಅಬುದಾಬಿಯಿಂದ ಮಂಗಳವಾರ ಹಾರಾಟ ಆರಂಭಿಸುವ ಸಂದರ್ಭ ಹಕ್ಕಿ ಢಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.
ಸಾಮಾನ್ಯವಾಗಿ ಹಾರಾಟ ಆರಂಭಿಸುವಾಗ ಅಥವಾ ಕೆಳಗೆ ಇಳಿಯುವ ಸಂದರ್ಭ ವಿಮಾನಕ್ಕೆ ಹಕ್ಕಿ ಢಿಕ್ಕಿ ಹೊಡೆಯುತ್ತದೆ.
ಇದು ಕೆಲವೊಮ್ಮೆ ವಿಮಾನಕ್ಕೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಪೈಲಟ್‌ಗಳು ಇಂತಹ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.
ಈ ಪ್ರಕರಣದಲ್ಲಿ ವಿಮಾನದ ಸಿಬ್ಬಂದಿ ಎಲ್ಲಾ ಸುರಕ್ಷಾ ನಿಯಮಗಳನ್ನು ಅನುಸರಿಸಿದ್ದಾರೆ. ಶಂಕಿತ ಹಕ್ಕಿ ಢಿಕ್ಕಿಯ ನಂತರ ವಿಮಾನವನ್ನು ಪರಿಶೀಲಿಸಿದ್ದಾರೆ.
ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಪೈಲಟ್‌ಗಳು ಪ್ರಯಾಣವನ್ನು ಮುಂದುವರಿಸಲು ನಿರ್ಧರಿಸಿದರು. ಪ್ರಯಾಣದುದ್ದಕ್ಕೂ ವಿಮಾನಕ್ಕೆ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ ಎಂದು ವರದಿ ಹೇಳಿದೆ.
ಅನಂತರ ವಿಮಾನ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿ ಹೇಳಿದೆ.

