ಟೆಹರಾನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‍ನ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಘೆರ್ ಘಾಲಿಬಾಫ್ ಆರೋಪಿಸಿದ್ದು, ಬೆದರಿಕೆಯ ನೆರಳಿನಡಿ ಮಾತುಕತೆ ನಡೆಯುವುದಾದರೆ ಇರಾನ್ ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ.
ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಬುಧವಾರ (ಎಪ್ರಿಲ್ 22) ಕೊನೆಗೊಳ್ಳುವುದಕ್ಕೂ ಮುನ್ನ ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಸಂಭಾವ್ಯ ಮಾತುಕತೆಯ ಕುರಿತ ಅನಿಶ್ಚಿತತೆ ಹೆಚ್ಚಿರುವ ನಡುವೆಯೇ ಇರಾನ್ ನಾಯಕರ ಈ ಹೇಳಿಕೆ ಹೊರಬಿದ್ದಿದೆ.
ದಿಗ್ಬಂಧನ, ಕದನ ವಿರಾಮದ ಉಲ್ಲಂಘನೆಯ ಮೂಲಕ ಟ್ರಂಪ್ ಮಾತುಕತೆಯ ಮೇಜನ್ನು ತಮ್ಮತ್ತ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಬೆದರಿಕೆಯ ಮೂಲಕ ತಮ್ಮ ಇಚ್ಛೆಯನ್ನು ಸಾಧಿಸಬಹುದು ಎಂಬ ಕನಸು ಕಾಣುತ್ತಿದ್ದಾರೆ. ಆದರೆ ಬೆದರಿಕೆಯ ನೆರಳಿನಡಿಯ ಮಾತುಕತೆಯನ್ನು ನಾವು ಒಪ್ಪುವುದಿಲ್ಲ ಮತ್ತು ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಅವಧಿಯಲ್ಲಿ ನಾವು ನಮ್ಮ ಹೊಸ ಕಾರ್ಡ್‍ಗಳನ್ನು ಯುದ್ಧರಂಗದಲ್ಲಿ ಬಹಿರಂಗಪಡಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಘಾಲಿಬಾಫ್ `ಎಕ್ಸ್'ನಲ್ಲಿ ಎಚ್ಚರಿಕೆ ನೀಡಿದ್ದಾರೆ.

