ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಈ ವರ್ಷ ನಡೆಯುವುದೂ ಅನುಮಾನವಾಗಿ ಉಳಿದಿದೆ. ನಾಗರಿಕರ ನಿರಂತರ ಹೋರಾಟ, ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪರಿಣಾಮ 30.36ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗೆ ಸರ್ಕಾರದ ಅಂಗೀಕಾರ ಲಭಿಸಿದರೂ, ಅಭಿವೃದ್ಧಿ ಭಾಗ್ಯ ಲಭಿಸಲೇ ಇಲ್ಲ. ಇದರಿಂದ ವಾಹನಗಳು ಹೊಂಡ-ಗುಂಡಿಗಳಲ್ಲಿ ಸಂಚರಿಸುವುದರ ಜತೆಗೆ ಧೂಳಿನ ಸಿಂಚನದೊಂದಿಗೆ ಪ್ರಯಾಣಿಕರು ಸಂಚರಿಸಬೇಕಾದ ಅನಿವಾರ್ಯತೆಯಿದೆ.
ಕಾಸರಗೋಡಿನ ಬಗ್ಗೆ ನಿರ್ಲಕ್ಷ್ಯ:
ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಇಲ್ಲಿನ ರಸ್ತೆ ಬಗ್ಗೆ ಜನಪ್ರತಿನಿಧಿಗಳಿಗಿರುವ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಒಂದೆಡೆ ನಾಗರಿಕರ ಪ್ರತಿಭಟನೆ, ಇನ್ನೊಂದೆಡೆ ಖಾಸಗಿ ಬಸ್ ಮಾಲಿಕರ ಸಂಘದಿಂದ ಬಸ್ ನಿಲುಗಡೆಗೊಳಿಸಿ ಹರತಾಳ ನಡೆಸಿದರೂ, ಸರ್ಕಾರ ಜಪ್ಪೆನ್ನಲಿಲ್ಲ. 2026 ಜನವರಿಯಲ್ಲೇ ರಸ್ತೆ ಅಭಿವೃದ್ಧಿಗೆ ಮೊತ್ತ ಮಂಜೂರಾಗಿ ಲಭಿಸಿದರೂ, ಇದನ್ನು ಅಭಿವೃದ್ಧಿ ಕಾಮಗಾರಿ ಆರಂಭಿಸುವಲ್ಲಿ ಎದುರಾಗಿರುವ ತೊಡಕುಗಳ ಬಗ್ಗೆ ಅಧಿಕಾರಿಗಳಲ್ಲೂ ಉತ್ತರವಿಲ್ಲದ ಸ್ಥಿತಿಯದೆ.
ದಿನವೊಂದಕ್ಕೆ ನೂರಾರು ಘನ ವಾಹನಗಳು ಭಾರೀ ಪ್ರಮಾಣದಲ್ಲಿ ಕಗ್ಗಲ್ಲು, ಜಲ್ಲಿಕಲ್ಲು, ಮರಳು ಸೇರಿದಂತೆ ವಿವಿಧ ಸಾಮಗ್ರಿ ಹೇರಿಕೊಂಡು ಈ ಹಾದಿಯಾಗಿ ಸಂಚರಿಸುತ್ತಿದೆ. ಅತಿಯಾದ ಭಾರ ಸೇರಿದಂತೆ ವಿವಿಧ ಕಾನೂನು ಉಲ್ಲಂಘಿಸಿ ಲಾರಿಗಳು ಸಂಚರಿಸುತ್ತಿದ್ದರೂ, ಅಧಿಕಾರಿಗಳು ಇವುಗಳ ತಪಾಸಣೆಗೂ ಮುಂದಾಗುತ್ತಿಲ್ಲ. ಇನ್ನು ಪೆರ್ಲ ಆರ್‍ಟಿಓ ಚೆಕ್‍ಪೋಸ್ಟ್ ಅಧಿಕಾರಿಗಳುಸಂಜೆ 5ರ ವರೆಗೆ ಮಾತ್ರ ಕರ್ತವ್ಯದಲ್ಲಿದ್ದು,ನಂತರ ಕಚೇರಿ ಮುಚ್ಚುಗಡೆಯಾಗುತ್ತಿದೆ. ಸಂಜೆ 5ರ ನಂತರ ಇಂತಹ ಘನ ವಾಹನಗಳು ಅತಿಯಾದ ಭಾರ ಹೇರಿಕೊಂಡು ರಸ್ತೆ ಮೂಲಕ ಸಂಚಾರ ನಡೆಸುತ್ತಿರುವುದರಿಂದ ರಸ್ತೆ ಹೆಚ್ಚು ಶಿಥಿಲಾವಸ್ಥೆ ತಲುಪಿದೆ.
ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸಲಿರುವ ಪ್ರಮುಖ ರಸ್ತೆ ಇದಾಗಿದ್ದು, ಶಿಥಿಲ ರಸ್ತೆಯಲ್ಲಿನ ಪ್ರಯಾಣ ಚಾಲಕರು ಹಾಗೂ ಜನರಲ್ಲಿ ವ್ಯಾಪಕ ಸಮಸ್ಯೆ ಹುಟ್ಟುಹಾಕಿದೆ. ಒಂದೆಡೆ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಂಗಾರಿಮಂದಗತಿಯಲ್ಲಿ ಸಾಗುತ್ತಿದ್ದರೆ, ಇಲ್ಲಿಗೆ ತೆರಳುವ ರಸ್ತೆಯ ಬಗ್ಗೆಯೂ ನಮ್ಮ ಜನಪ್ರತಿನಿಧಿಗಳುಉದಾಸೀನ ಪ್ರವೃತ್ತಿ ಮೆರೆಯುತ್ತಿರುವ ಬಗ್ಗೆ ಜನತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸುಮಾರು 40ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ನಡೆಸಲು ಸರ್ಕಾರ ಮುಂದಾಗುತ್ತಿದ್ದಂತೆ ನಾಗರಿಕರು ಎಚ್ಚೆತ್ತು ಇದಕ್ಕೆ ತಮ್ಮ ವಿರೋಧ ಸೂಚಿಸಿದ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗಾಗಿ 30.36ಕೋಟಿ ರೂ. ಮೀಸಲಿರಿಸಿದ್ದರೂ, ಎರಡುವರೆ ತಿಂಗಳು ಕಳೆದರೂ ಕಾಮಗಾರಿ ಆರಂಭಿಸಲಾಗಿಲ್ಲ.
ಈ ಮಧ್ಯೆ ಪಳ್ಳತ್ತಡ್ಕ ಸೇತುವೆ ದುರ್ಬಲಗೊಂಡಿದ್ದು, ತಳಭಾಗದ ಕಾಂಕ್ರೀಟ್ ಚಪ್ಪಡಿ ಕಿತ್ತು ಬೀಳುತ್ತಿದೆ. ಸೇತುವೆ ಶಿಥಿಲಾವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎರಡೂ ಕಡೆ ಸೂಚನಾಫಲಕ ಅಳವಡಿಸಿದ್ದು, ಘನ ವಾಸಹನಗಳ ಸಂಚಾರದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.ಆದರೆ, ಅತಿಯಾದ ಭಾರ ಹೇರಿಕೊಂಡು ಸಾಗುತ್ತಿರುವ ಘನವಾಹನಗಳ ಸಂಚಾರಕ್ಕೆ ತಡೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ದುರ್ಬಲ ಸೇತುವೆ:
ಈ ಮಧ್ಯೆ ಪಳ್ಳತ್ತಡ್ಕ ಸೇತುವೆ ದುರ್ಬಲಗೊಂಡಿದ್ದು, ತಳಭಾಗದ ಕಾಂಕ್ರೀಟ್ ಚಪ್ಪಡಿ ಕಿತ್ತು ಬೀಳುತ್ತಿದೆ. ಸೇತುವೆ ಶಿಥಿಲಾವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎರಡೂ ಕಡೆ ಸೂಚನಾಫಲಕ ಅಳವಡಿಸಿದ್ದು, ಘನ ವಾಸಹನಗಳ ಸಂಚಾರದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.ಆದರೆ, ಅತಿಯಾದ ಭಾರ ಹೇರಿಕೊಂಡು ಸಾಗುತ್ತಿರುವ ಘನವಾಹನಗಳ ಸಂಚಾರಕ್ಕೆ ತಡೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ವಿಪರ್ಯಾಸ. ರಸ್ತೆ ಕಾಮಗಾರಿ ಆರಂಭಕ್ಕೆ ಚುನಾವಣಾ ಪ್ರಕ್ರಿಯೆ ಅಡ್ಡಿಯಾಗಿದ್ದರೆ, ಚುನಾವಣೆ ಕಳೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ವೇಳೆಗೆ ಮಳೆಗಾಲ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ರಸ್ತೆಕಾಮಗಾರಿ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಯೇ ಹೆಚ್ಚು. ಈ ಮೂಲಕ ಶೋಚನೀಯಾವಸ್ಥೆಯಲ್ಲೇ ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆಯಲ್ಲಿ ಪ್ರಯಾಣಿಸಬೇಕಾದ ದುಸ್ಥಿತಿ ಎದುರಾಗಲಿದೆ.
ಅಭಿಮತ:
ಚೆರ್ಕಳ-ಕಲ್ಲಡ್ಕ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕ ವರೆಗೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 30.36ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮತಿಯೊಂದಿಗೆ ತಾಂತ್ರಿಕ ಅನುಮತಿ ಲಭ್ಯವಾಗಿದ್ದರೂ, ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕೆಲಸ ರಂಭಿಸಲಾಗಿಲ್ಲ.
ಸಿ.ಜೆ ಕೃಷ್ಣನ್, ಸಯಾಯಕ ಮಹಾ ಅಭಿಯಂತ
'ಕಿಫ್‍ಬಿ' ಕಾಸರಗೋಡು



