ವಾಶಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪೋಪ್ ಲಿಯೊ ನಡುವೆ ಬಹಿರಂಗ ವಾಗ್ಯುದ್ಧದ ನಡುವೆಯೇ, ಪೋಪ್ ಅವರು ನೈತಿಕತೆಗೆ ಬದ್ಧರಾಗಿರಬೇಕು ಮತ್ತು ಅಮೆರಿಕದ ವ್ಯವಹಾರಗಳಿಂದ ದೂರ ಇರಬೇಕು ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಆಗ್ರಹಿಸಿದ್ದಾರೆ.
ಕೆಲವು ವಿಷಯಗಳಲ್ಲಿ ನೈತಿಕತೆಯ ವಿಷಯಕ್ಕೆ ಬದ್ಧವಾಗಿರುವುದು ವ್ಯಾಟಿಕನ್‍ಗೆ ಒಳ್ಳೆಯದು. ಕ್ಯಾಥೊಲಿಕ್ ಚರ್ಚ್‍ಗಳಲ್ಲಿ ಏನು ನಡೆಯುತ್ತಿದೆ ಎಂಬ ವಿಷಯದ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಎಂದು ವ್ಯಾನ್ಸ್ ಹೇಳಿರುವುದಾಗಿ ವರದಿಯಾಗಿದೆ.
ಪೋಪ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿರುವುದನ್ನು ಒಪ್ಪುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ವ್ಯಾನ್ಸ್ `ಅಮೆರಿಕದ ಅಧ್ಯಕ್ಷರು ಅಮೆರಿಕಾದ ಸಾರ್ವಜನಿಕ ನೀತಿಯನ್ನು ನಿರ್ದೇಶಿಸಲು ಬಿಡಬೇಕು. ಇಬ್ಬರ ನಡುವಿನ ಬಿಕ್ಕಟ್ಟಿನ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ' ಎಂದು ಉತ್ತರಿಸಿದರು. ಈ ಮಧ್ಯೆ, ಶಾಂತಿಗಾಗಿ ಕರೆ ನೀಡಿರುವ ಪೋಪ್‍ರನ್ನು ಗುರಿಯಾಗಿಸುವ ಮೂಲಕ ಟ್ರಂಪ್ ಪೋಪ್ ಅವರನ್ನು ಅವಮಾನಿಸಿದ್ದಾರೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಖಂಡಿಸಿದ್ದಾರೆ.

