ಚೆನ್ನೈ/ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದಿನಿಂದ (ಏಪ್ರಿಲ್ 16) ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಮಹಿಳಾ ಮೀಸಲಾತಿಗೆ ಎಲ್ಲಾ ಪಕ್ಷಗಳು ಬೆಂಬಲ ಸೂಚಿಸಿದ್ದರೂ, ಕ್ಷೇತ್ರ ಪುನರ್‌ವಿಂಗಡಣೆಗೆ ವಿರೋಧ ವ್ಯಕ್ತಪಡಿಸಿವೆ.
ಮಹಿಳಾ ಮೀಸಲಾತಿ ನೆಪದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕ್ಷೇತ್ರ ಪುನರ್‌ವಿಂಗಡಣೆಯು ದಕ್ಷಿಣದ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.ಪ್ರಮುಖ ಮುಖ್ಯಾಂಶಗಳು• ವಿಶೇಷ ಅಧಿವೇಶನ ಮತ್ತು ಮಸೂದೆಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಚರ್ಚಿಸಲು ಕೇಂದ್ರ ಸರ್ಕಾರವು ಏಪ್ರಿಲ್ 16ರಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ.• ದಕ್ಷಿಣ ರಾಜ್ಯಗಳ ಪ್ರಬಲ ವಿರೋಧಕ್ಷೇತ್ರ ಮರುವಿಂಗಡಣೆಯು ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ದಕ್ಷಿಣದ ಮುಖ್ಯಮಂತ್ರಿಗಳು ಆಕ್ಷೇಪಿಸಿದ್ದಾರೆ.• ವಿರೋಧ ಪಕ್ಷಗಳ ಒಗ್ಗಟ್ಟಿನ ನಿರ್ಧಾರಮಹಿಳಾ ಮೀಸಲಾತಿಯನ್ನು ಸ್ವಾಗತಿಸುವ ವಿರೋಧ ಪಕ್ಷಗಳು, ಅದರ ಜೊತೆಗೆ ತರುತ್ತಿರುವ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿ ಒಗ್ಗಟ್ಟಿನಿಂದ ವಿರೋಧಿಸಲು ನಿರ್ಧರಿಸಿವೆ.• ತಮಿಳುನಾಡಿನ ಪ್ರತಿಭಟನೆ ಮತ್ತು ಎಚ್ಚರಿಕೆಡಿಎಂಕೆ ಪಕ್ಷವು ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಕೇಂದ್ರವು ದಕ್ಷಿಣದ ಧ್ವನಿಗೆ ಕಿವಿಗೊಡದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ಎಚ್ಚರಿಸಿದ್ದಾರೆ.• ರಾಜಕೀಯ ದುರುದ್ದೇಶದ ಆರೋಪಕ್ಷೇತ್ರ ಪುನರ್‌ವಿಂಗಡಣೆಯು ಮಹಿಳಾ ಮೀಸಲಾತಿಯನ್ನು ನೆಪವನ್ನಾಗಿ ಬಳಸಿಕೊಂಡು ವಿರೋಧ ಪಕ್ಷಗಳನ್ನು ದಮನಿಸುವ ಮತ್ತು ಪ್ರಜಾಪ್ರಭುತ್ವದ ಸಮತೋಲನವನ್ನು ಹಾಳುಮಾಡುವ ಹುನ್ನಾರವಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.ಪ್ರಮುಖ ಅಂಕಿಅಂಶಗಳುಏಪ್ರಿಲ್ 16ಅಧಿವೇಶನ ಆರಂಭದ ದಿನಾಂಕಮೂರು ದಿನಅಧಿವೇಶನ ನಡೆಯುವ ದಿನಗಳ ಸಂಖ್ಯೆಶೇ 33ಪ್ರಸ್ತಾವಿತ ಮೀಸಲಾತಿ ಪ್ರಮಾಣ2011ಜನಗಣತಿ ಆಧಾರದ ಮೇಲೆ ಪುನರ್‌ವಿಂಗಡಣೆಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಖರ್ಗೆ ನಿವಾಸದಲ್ಲಿ ಸಭೆ: ಮಹಿಳಾ ಮೀಸಲು, ಕ್ಷೇತ್ರ ಪುನರ್‌ವಿಂಗಡಣೆ ಬಗ್ಗೆ ಚರ್ಚೆ
ಉದ್ದೇಶಿತ ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆ ಬಗ್ಗೆ ದಕ್ಷಿಣ ಭಾರತದ ಬಿಜೆಪಿಯೇತರ ಮುಖ್ಯಮಂತ್ರಿಗಳು ವಿರೋಧಿಸಿದ್ದು, ತಮ್ಮ ರಾಜ್ಯಗಳ ಹಿತಾಸಕ್ತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಂಡಿಸಲಾಗುವ ತಿದ್ದುಪಡಿಗಳ ವಿರುದ್ಧ ಮತ ಚಲಾಯಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಏಪ್ರಿಲ್ 16ರಂದು ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶನ ಪ್ರತಿಭಟನೆಯನ್ನು ನಡೆಸುವುದಾಗಿ ಹೇಳಿದೆ. ವಿರೋಧ ಪಕ್ಷದ ನಾಯಕರು ಈ ಅಧಿವೇಶನ ನಡೆಯುತ್ತಿರುವ ಸಮಯ ಮತ್ತು ಒಮ್ಮತದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮೀಸಲಿಗೆ ಮುಂದಡಿ: ಕ್ಷೇತ್ರ ಪುನರ್‌ವಿಂಗಡಣೆ ಜೋಡಣೆಗೆ ವಿಪಕ್ಷಗಳ ಆಕ್ಷೇಪ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ'ಸಂಸತ್ತಿನಲ್ಲಿ ಮಂಡನೆಯಾಗಲಿರುವ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿನ ಕ್ಷೇತ್ರ ಮರುವಿಂಗಡಣೆ ನಿಬಂಧನೆಗಳ ವಿರುದ್ಧ ಒಗ್ಗಟ್ಟಿನಿಂದ ಮತ ಚಲಾಯಿಸಲು ಹಲವಾರು ವಿರೋಧ ಪಕ್ಷಗಳು ನಿರ್ಧರಿಸಿವೆ. ನಾವು ಮಹಿಳಾ ಮೀಸಲಾತಿಯ ವಿರುದ್ಧವಾಗಿಲ್ಲ, ಆದರೆ ಮಸೂದೆಯನ್ನು ತರುತ್ತಿರುವ ರೀತಿಯನ್ನು ವಿರೋಧಿಸುತ್ತೇವೆ. ಇದು ರಾಜಕೀಯ ಪ್ರೇರಿತ ಕಾನೂನು. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು, ದಮನಿಸಲು ಸರ್ಕಾರ ಈ ಕಾನೂನು ತರುತ್ತಿದೆ.
'ನಾವು ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಈ ಹಿಂದೆ ಅಂಗೀಕರಿಸಲ್ಪಟ್ಟ ತಿದ್ದುಪಡಿಯನ್ನು ಜಾರಿಗೆ ತರುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಮರುವಿಂಗಡಣೆಯ ತಂತ್ರದೊಂದಿಗೆ ಜಾರಿಗೊಳಿಸುತ್ತಿದ್ದಾರೆ. ಆದ್ದರಿಂದ, ಎಲ್ಲಾ ಪಕ್ಷಗಳು ಒಗ್ಗಟ್ಟಿನಿಂದ ಈ ಮಸೂದೆಯನ್ನು ವಿರೋಧಿಸಲು ನಿರ್ಧರಿಸಿವೆ' ಎಂದು ಖರ್ಗೆ ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆಯು ದಕ್ಷಿಣದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನ ಧ್ವನಿಗೆ ಕೇಂದ್ರವು ಕಿವಿಗೊಡದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕ್ಷೇತ್ರ ಪುನರ್‌ವಿಂಗಡನೆ ಬಗ್ಗೆ ಪಕ್ಷದ ಸಂಸದರು ಮತ್ತು ಡಿಎಂಕೆಯ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ನಂತರ ಸ್ಟಾಲಿನ್, 'ನಮ್ಮ ತಲೆಯ ಮೇಲೆ ತೂಗಾಡುತ್ತಿದ್ದ ಕತ್ತಿ ಈಗ ನಮ್ಮ ಮೇಲೆಯೇ ಬಿದ್ದಿದೆ' ಎಂದು ಹೇಳಿದ್ದಾರೆ.
ಕ್ಷೇತ್ರ ಪುನರ್‌ವಿಂಗಡಣೆ | ಕೇಂದ್ರದ ನಿರ್ಧಾರ ಒಪ್ಪಲ್ಲ: ಸ್ಟಾಲಿನ್
ಇದನ್ನು ಗಂಭೀರ ಅಪಾಯ ಎಂದಿರುವ ಸ್ಟಾಲಿನ್ ಈ ಬಗ್ಗೆ ಕಾರ್ಯತಂತ್ರ ರೂಪಿಸಲು ವಿವಿಧ ರಾಜ್ಯಗಳ ಸಂಸದರನ್ನು ಡಿಎಂಕೆ ಸಂಪರ್ಕಿಸುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಇಂದು ಸಂಸತ್ತಿನಲ್ಲಿ ಚರ್ಚೆಗೆ ಬರುವ ಕ್ಷೇತ್ರ ಪುನರ್‌ವಿಂಗಡಣೆ ತಿದ್ದುಪಡಿಯು ತಮಿಳುನಾಡು ಸೇರಿ ದಕ್ಷಿಣದ ರಾಜ್ಯಗಳ ವಿರುದ್ಧದ ಐತಿಹಾಸಿಕ ಅನ್ಯಾಯ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಪ್ರಕ್ರಿಯೆಯು ಭಾರತದ ಪ್ರಗತಿಗೆ ದಕ್ಷಿಣದ ರಾಜ್ಯಗಳು ನೀಡಿದ ಕೊಡುಗೆಗೆ ಸಿಕ್ಕ ಶಿಕ್ಷೆಯೇ? ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆ ವಿರುದ್ಧ ಕಳೆದ ವರ್ಷ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನೂ ಸ್ಟಾಲಿನ್ ಕರೆದಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಪುನರ್‌ವಿಂಗಡಣೆ ಯಾರಿಗೆ ಲಾಭ? ಪ್ರಸ್ತುತ ವಿಧಾನವು ಕೆಲವು ದೊಡ್ಡ ರಾಜ್ಯಗಳಿಗೆ ಭಾರಿ ಅನುಕೂಲ ಮಾಡಿಕೊಡುತ್ತದೆ. ಕರ್ನಾಟಕ ಸೇರಿ ದಕ್ಷಿಣ ಭಾರತವನ್ನು ಮತ್ತು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆಯು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ, ಕೇರಳದಂತಹ ರಾಜ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
2011ರ ಜನಗಣತಿಯ ಆಧಾರದ ಮೇಲೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಮಸೂದೆಯು ರಾಜ್ಯಗಳ ಹಕ್ಕುಗಳು ಮತ್ತು ಸಮಾನ ನ್ಯಾಯದ ತತ್ವದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ರಾಜ್ಯಗಳೊಂದಿಗೆ ಒಮ್ಮತಕ್ಕೆ ಬಾರದೆ ಕೇಂದ್ರವು ಇಂತಹ ನಿರ್ಣಾಯಕ ವಿಷಯದಲ್ಲಿ ಮುಂದುವರಿಯುತ್ತಿರುವುದು ಆತಂಕಕಾರಿ ಎಂದು ವಿಜಯನ್ ಹೇಳಿದ್ದಾರೆ.
ಮಹಿಳಾ ಮೀಸಲಾತಿಯ ನೆಪದಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯನ್ನು ಜಾರಿಗೆ ತರಲು ಸರ್ಕಾರ 'ಕುತಂತ್ರದ ಸಂಚು' ರೂಪಿಸುತ್ತಿದೆ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್ ಆರೋಪಿಸಿದ್ದಾರೆ. ಸರ್ಕಾರವು ಮಹಿಳಾ ಮೀಸಲಾತಿಯನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಿದೆ. ಕ್ಷೇತ್ರ ಮರುವಿಂಗಡಣೆ ಎಂಬುದು ಕುತಂತ್ರದ ಭಾಗ. ಮಹಿಳೆಯರು ಕೇವಲ ನೆಪ' ಎಂದು ಅವರು ಹೇಳಿದ್ದಾರೆ
ಕ್ಷೇತ್ರ ಮರುವಿಂಗಡಣೆ ಕುರಿತು ದಕ್ಷಿಣ ರಾಜ್ಯಗಳು ಎತ್ತಿರುವ ಕಳವಳಗಳನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ ಅದು ಗಂಭೀರವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಕೇಂದ್ರದ ಕ್ಷೇತ್ರ ಮರುವಿಂಗಡಣೆಯು ದಕ್ಷಿಣದ ರಾಜ್ಯಗಳ ಧ್ವನಿಯನ್ನು ದಮನ ಮಾಡುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಅಧಿವೇಶನ ನಡೆಯುತ್ತಿರುವ ಸಮಯವನ್ನು 'ಯೋಜಿತ ಪಿತೂರಿ' ಎಂದು ಅವರು ಬಣ್ಣಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಸಂಸದರು ಅಧಿವೇಶನಕ್ಕೆ ಹಾಜರಾಗುವುದನ್ನು ತಡೆಯುವ ಉದ್ದೇಶದಿಂದ ಈಗ ಅಧಿವೇಶನ ಕರೆಯಲಾಗಿದೆ. ಚುನಾವಣೆಯ ನಂತರ ಸಂಸತ್ತಿನ ಅಧಿವೇಶನ ನಡೆಸಿದರೆ ಆಗುವ ಅಪಾಯವೇನು? ಎಂದು ಪ್ರಶ್ನಿಸಿದ್ದಾರೆ.

