ನವದೆಹಲಿ: 'ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ- 2026' ವಿರುದ್ಧ ಕರ್ನಾಟಕದ ಆರು ಜನ ಲಿಂಗತ್ವ ಅಲ್ಪಸಂಖ್ಯಾತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
'ಲಿಂಗತ್ವ ಅಲ್ಪಸಂಖ್ಯಾತರ ಆತ್ಮಗೌರವ, ಸ್ವಲಿಂಗ ನಿರ್ಧಾರಣೆ ಹಾಗೂ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ಮೇಲ್ಮನವಿ ಸಲ್ಲಿಸಲಾಗಿದೆ' ಎಂದು ಅರ್ಜಿದಾರರು ಹೇಳಿದ್ದು, ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.
ಅಕ್ಕೈ ಪದ್ಮಶಾಲಿ, ರೂಮಿ ಹರೀಶ್, ಅಬೇದ ಬೇಗಮ್, ಪ್ರಕಾಶಿ, ಮೋನಿಕಾ ಹಾಗೂ ನಿತ್ಯಾನಂದ ಈ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವು ತಿದ್ದುಪಡಿ ಮಸೂದೆಯನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಮಂಡಿಸಿ, ಇತ್ತೀಚೆಗೆ ಅಂಗೀಕಾರ ಪಡೆದಿತ್ತು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

