ಬೆಂಗಳೂರು: ಲಘು ಯುದ್ಧ ವಿಮಾನ ತೇಜಸ್‌ನಲ್ಲಿ ಬಳಕೆಯಾಗುವ 'ಎಫ್404-ಐಎನ್20' ಎಂಜಿನ್‌ಗಳ ಲಭ್ಯತೆ ಮತ್ತು ನಿರ್ವಹಣೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ದೇಶದಲ್ಲಿ ಎಂಜಿನ್ ದುರಸ್ತಿ ಘಟಕ ಸ್ಥಾಪಿಸಲು ಜಿಇ ಏರೋಸ್ಪೇಸ್, ಭಾರತೀಯ ವಾಯುಪಡೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಘಟಕವನ್ನು ಜಿಇ ಏರೋಸ್ಪೇಸ್‌ನ ತಾಂತ್ರಿಕ ನೆರವಿನೊಂದಿಗೆ ಭಾರತೀಯ ವಾಯುಪಡೆಯು ಸ್ಥಾಪಿಸಲಿದೆ. ಇದು ಸ್ವದೇಶಿ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ. ಈ ಘಟಕವು ಕಾರ್ಯಾರಂಭ ಮಾಡಿದ ಬಳಿಕ, ವಿಮಾನಗಳ ದುರಸ್ತಿಗಾಗಿ ವಿದೇಶಿ ಕೇಂದ್ರಗಳ ಮೇಲೆ ಅವಲಂಬಿತ ವಾಗುವ ಅಗತ್ಯವಿರುವುದಿಲ್ಲ. ಅಲ್ಲದೆ, ಎಂಜಿನ್‌ನ ದುರಸ್ತಿಯ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ಜಿಇ ಏರೋಸ್ಪೇಸ್ ಪ್ರಕಟಣೆ ಯಲ್ಲಿ ತಿಳಿಸಿದೆ.
ಈ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಾಯುಪಡೆಯೇ ನಿರ್ವಹಿಸಲಿದ್ದು, ಜಿಇ ಏರೋಸ್ಪೇಸ್ ತಾಂತ್ರಿಕ ಮಾಹಿತಿ, ತರಬೇತಿ, ಪೂರಕ ಸಿಬ್ಬಂದಿ ಹಾಗೂ ಅಗತ್ಯ ಬಿಡಿಭಾಗಗಳು ಮತ್ತು ವಿಶೇಷ ಉಪಕರಣಗಳನ್ನು ಒದಗಿಸಲಿದೆ ಎಂದು ತಿಳಿಸಿದೆ.

