ಮುಳ್ಳೇರಿಯ: ಕೇರಳದ ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿನ ಶಿಕ್ಷಕರ ನೇಮಕಾತಿ ಅಂಗೀಕಾರಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯ ನೀಡಿದ್ದ ತಡೆ ಆಜ್ಞೆಯ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರವು ತನ್ನ ಸಮಗ್ರ ವಾದವನ್ನು ಮಂಡಿಸಿದ ಬಳಿಕವಷ್ಟೇ ನ್ಯಾಯಾಲಯ ಅಂತಿಮ ತೀರ್ಮಾನ ಪ್ರಕಟಿಸಲಿದೆ.
ನ್ಯಾಯಾಲಯದ ಈ ಬೆಳವಣಿಗೆಯಿಂದಾಗಿ ಕುಂಟಾರು ಶಾಲೆಯ ಮುಖ್ಯೋಪಾಧ್ಯಾಯಿನಿ ದಾಕ್ಷಾಯಣಿ ಅವರ ನೇಮಕಾತಿ ಅಂಗೀಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ಸ್ಪಷ್ಟ ಸುತ್ತೋಲೆ ಮತ್ತು ನಿಯಮಾವಳಿಗಳು ಜಾರಿಯಲ್ಲಿದ್ದರೂ, ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅದನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಸರ್ಕಾರದ ಆದೇಶವಿದ್ದರೂ ದಾಕ್ಷಾಯಣಿ ಅವರ ಹುದ್ದೆ ಅಂಗೀಕಾರವು ಅನಿಶ್ಚಿತತೆಯಲ್ಲಿ ಮುಂದುವರಿದಿರುವುದು ಶಿಕ್ಷಣ ಪ್ರೇಮಿಗಳು ಹಾಗೂ ಕನ್ನಡ ಸಂಘಟನೆಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
?ಗಡಿನಾಡಿನ ಕನ್ನಡ ಮಾಧ್ಯಮ ಶಾಲೆಗಳ ಹಿತರಕ್ಷಣೆ ಮತ್ತು ಅರ್ಹ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಶಾಲಾ ಹಿತರಕ್ಷಣಾ ಸಮಿತಿ ತೀವ್ರ ಹೋರಾಟಕ್ಕೆ ಅಣಿಯಾಗುತ್ತಿವೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಶಿಕ್ಷಕರಿಗೆ ವಂಚಿಸುತ್ತಿರುವ ಶಿಕ್ಷಣ ಇಲಾಖೆಯ ಧೋರಣೆಯ ವಿರುದ್ಧ ಶೀಘ್ರವೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆಗಳು ನಡೆದಿವೆ.
ಅರ್ಹ ಶಿಕ್ಷಕರ ನೇಮಕಾತಿಗೆ ತಕ್ಷಣವೇ ಅಂಗೀಕಾರ ಮುದ್ರೆ ಒತ್ತಿ, ಕನ್ನಡ ಶಾಲೆಗಳ ಅಸ್ತಿತ್ವ ಮತ್ತು ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಸ್ಥಳೀಯರು ಪ್ರಬಲವಾಗಿ ಆಗ್ರಹಿಸಿದ್ದಾರೆ. ನ್ಯಾಯಾಲಯದ ಮುಂದಿನ ವಿಚಾರಣೆ ಹಾಗೂ ಸರ್ಕಾರದ ನಿಲುವಿನ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.



