HEALTH TIPS

ತಲೆಮಾರುಗಳಿಂದ ಉಳಿದು ಬಂದ ಪನೆಯಾಲದ ಅಪರೂಪದ ನೈಸರ್ಗಿಕ ಕಾಡು- ನೂರಕ್ಕೂ ಹೆಚ್ಚು ಸಸ್ಯಜಾತಿ, ಔಷಧೀಯ ಸಸ್ಯಸಂಪತ್ತು, ವೈವಿಧ್ಯಮಯ ಜೀವಸಂಕುಲದ ನೆಲೆ; 'ನಿಟ್ಟೋಣಿ' ಕಿರುಚಿತ್ರಕ್ಕೂ ಚಿತ್ರೀಕರಣ ತಾಣವಾದ ಹಸಿರು ತಾಣ

ಮುಳ್ಳೇರಿಯ: ಕಾಸರಗೋಡು ಜಿಲ್ಲೆಯ ಗಡಿ ಗ್ರಾಮ ಬೆಳ್ಳೂರು ಪಂಚಾಯತಿ ವ್ಯಾಪ್ತಿಯ ಪನೆಯಾಲದಲ್ಲಿ ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದಿರುವ ನೈಸರ್ಗಿಕ ಕಾಡು ಪರಿಸರಾಸಕ್ತರು ಹಾಗೂ ಪ್ರಕೃತಿಪ್ರಿಯರ ಗಮನ ಸೆಳೆಯುತ್ತಿದೆ. ಹಲವು ದಶಕಗಳಿಂದ ತನ್ನ ಸಹಜ ಸ್ವರೂಪದಲ್ಲಿಯೇ ಉಳಿದುಕೊಂಡಿರುವ ಈ ಕಾಡು, ಸಣ್ಣ ಭೂಪ್ರದೇಶದಲ್ಲಿಯೂ ಸಮೃದ್ಧ ಜೀವ ವೈವಿಧ್ಯವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.


ಪನೆಯಾಲ ನಿವಾಸಿ ಗೋವಿಂದ ಭಟ್ ಅವರ ಹೆಸರಿನಲ್ಲಿ ಸುಮಾರು 1 ಎಕರೆ 55 ಸೆಂಟ್ಸ್ ಭೂ ಪ್ರದೇಶವಿದೆ. ಅವರ ಸಹೋದರ ಶಂಕರ ನಾರಾಯಣ ಭಟ್ಟರ ಹೆಸರಿನಲ್ಲಿರುವ ಜಾಗದ ನಿರ್ವಹಣೆಯನ್ನೂ ಗೋವಿಂದ ಭಟ್ ಅವರೇ ನೋಡಿಕೊಳ್ಳುತ್ತಿದ್ದು, ಆ ಪ್ರದೇಶವೂ ಇವರ ಜಾಗಕ್ಕೆ ಹೊಂದಿಕೊಂಡಿದೆ. ಎರಡೂ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 6 ಎಕರೆ ವಿಸ್ತೀರ್ಣದಲ್ಲಿ ನೈಸರ್ಗಿಕ ಕಾಡು ಹರಡಿಕೊಂಡಿದೆ. ಗೋವಿಂದ ಭಟ್ ಅವರ ತಂದೆ ಮಹಾಬಲ ಭಟ್ಟ ಅವರ ಕಾಲದಿಂದಲೂ ಈ ಕಾಡನ್ನು ತೆರವುಗೊಳಿಸದೆ ಉಳಿಸಿಕೊಂಡು ಬರಲಾಗಿದೆ. ಹೀಗಾಗಿ ಇದು ಕೇವಲ ಒಂದು ಖಾಸಗಿ ಜಮೀನಿನ ಭಾಗವಾಗಿರದೆ, ಕುಟುಂಬದ ತಲೆಮಾರುಗಳ ಪ್ರಕೃತಿ ಸಂರಕ್ಷಣೆಯ ಪರಂಪರೆಯಾಗಿ ಬೆಳೆದಿದೆ.  


ಗೋವಿಂದ ಭಟ್ ಅವರು ಪನೆಯಾಲದಲ್ಲಿಯೇ ಹುಟ್ಟಿ ಬೆಳೆದವರು. ಹತ್ತನೇ ತರಗತಿಯ ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿ ತೊಡಗಿಕೊಂಡಿರುವ ಅವರು, ತಮ್ಮ ಜಮೀನಿನ ಕಾಡು ಮತ್ತು ಸುತ್ತಮುತ್ತಲಿನ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಂಡು ಬಂದಿದ್ದಾರೆ. ಕಾಡಿನ ಮರಗಳನ್ನು ಕಡಿಯದೆ ಉಳಿಸಬೇಕು ಎಂಬುದು ಅವರ ಅಣ್ಣ ಶಂಕರನಾರಾಯಣ ಭಟ್ಟ ಅವರ ಮನೋಭಾವನೆ, ಹೀಗಾಗಿ "ಕಾಡನ್ನು ಕಡಿಯದೇ ಇರಲು ಪ್ರೇರಣೆ ತನ್ನ ಅಣ್ಣ" ಎನ್ನುತ್ತಾರೆ ಗೋವಿಂದಭಟ್ಟರು.  ಮರಗಳನ್ನು ಕಡಿದು ಕಾಡನ್ನು ನಾಶಪಡಿಸುವ ಬದಲು, ಇರುವ ಕಾಡನ್ನು ಉಳಿಸಬೇಕು, ಅದು ಪ್ರಕೃತಿಯ ಕೊಡುಗೆ, ನಾಶ ಪಡಿಸುವ ಹಕ್ಕು ಮಾನವನಿಗಿಲ್ಲ, ಕಾಡೆಂಬುದು ಸಕಲ ಚರಾಚರ ಜೀವಿಗಳಿಗೂ ಸೇರಿದ್ದು ಮಾನವನಿಗೆ ಮಾತ್ರವಲ್ಲ ಎಂಬ ದೃಷ್ಟಿಕೋನವೇ ಈ ಪ್ರದೇಶದ ಸಂರಕ್ಷಣೆಯ ಹಿಂದಿರುವ ಪ್ರಮುಖ ಕಾರಣವಾಗಿದೆ.


ಪಾರಂಪರಿಕ ಚಿಕಿತ್ಸಾ ಜ್ಞಾನಕ್ಕೂ ಕಾಡಿಗೂ ನಂಟು

ಈ ಕುಟುಂಬದ ಪ್ರಕೃತಿ ಸಂರಕ್ಷಣೆಗೆ ಮತ್ತೊಂದು ವಿಶಿಷ್ಟ ಆಯಾಮವಿದೆ. ಗೋವಿಂದ ಭಟ್ಟರ ಅಣ್ಣ ಶಂಕರನಾರಾಯಣ ಭಟ್ಟರಿಗೆ ಪಾರಂಪರಿಕ ಚಿಕಿತ್ಸಾ ಪದ್ಧತಿಯ ಜ್ಞಾನವಿದ್ದು, ಕೈಕಾಲು ಮುರಿತ, ಬೆನ್ನು, ಕುತ್ತಿಗೆ, ಸೊಂಟ ಮೊದಲಾದ ಭಾಗಗಳ ನೋವುಗಳಿಗೆ ಉಜ್ಜುವಿಕೆಯ(ಮಸಾಜಿಂಗ್) ಮೂಲಕ ಚಿಕಿತ್ಸೆ ನೀಡುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅನೇಕರು ಈ ಪಾರಂಪರಿಕ ಚಿಕಿತ್ಸೆಯಿಂದ ಪ್ರಯೋಜನ ಪಡೆದಿದ್ದಾರೆ. ಆಸ್ಪತ್ರೆಯ ಅತ್ಯಾಧುನಿಕ ಚಿಕಿತ್ಸೆ ಇಲ್ಲದೇ ಕೇವಲ ಈ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಿಂದಲೇ ಎಲುಬು, ನರಕ್ಕೆ ಸಂಬಂಧಿಸಿದ ನೋವುಗಳನ್ನು ಗುಣಪಡಿಸಿದ್ದಾರೆ.  ಉಜ್ಜುವಿಕೆಗೆ ಬಳಸುವ ಎಣ್ಣೆಯ ತಯಾರಿಕೆಗೆ ಅಗತ್ಯವಿರುವ ವಿವಿಧ ಔಷಧೀಯ ಸಸ್ಯಗಳ ಪರಿಚಯವೂ ಶಂಕರನಾರಾಯಣ ಭಟ್ಟರಿಗೆ ಇದೆ. ರಕ್ತವಾಳ, ಕುರುಂತೋಟಿ, ವಾತಂಕೊಳ್ಳಿ, ವಾತಂಕಳ್ಳಿ, ಸಂದುಬಳ್ಳಿ, ಚಿತ್ರಮೂಲ ಸೇರಿದಂತೆ ಅತ್ಯಪೂರ್ವ ಹಲವು ಸಸ್ಯಗಳ ರಸವನ್ನು ಬಳಸಲಾಗುತ್ತದೆ.  ಇಪ್ಪತ್ತೈದು ಬಗೆಯ ಔಷಧಗಳನ್ನು ಈ ಎಣ್ಣೆಯ ತಯಾರಿಕೆಗೆ ಬಳಸುತ್ತಾರೆ. ಇವುಗಳಲ್ಲಿ ಹೆಚ್ಚಿನ  ಸಸ್ಯಗಳೂ ಇವರ ನೈಸರ್ಗಿಕ ಕಾಡಿನಲ್ಲಿದೆ.  ಇವರು ಚಿಕಿತ್ಸೆ ಅಥವಾ ನೋವಿನ ಎಣ್ಣೆಯನ್ನು ಉದ್ಯಮದ ಅಥವಾ ವ್ಯಾಪಾರದ ದೃಷ್ಟಿಯಿಂದ ನೋಡಿಲ್ಲ.


ಗೋವಿಂದ ಭಟ್ಟರು ಫಾಸಿ ಎಣ್ಣೆ ಎಂಬ ಪಾರಂಪರಿಕ ಎಣ್ಣೆಯನ್ನೂ ತಯಾರಿಸುತ್ತಿದ್ದು, ಸ್ಥಳೀಯವಾಗಿ ಅದನ್ನು ಶೀತಕ್ಕೆ ಔಷಧೀಯ ಎಣ್ಣೆಯಾಗಿ ಪರಿಗಣಿಸಲಾಗುತ್ತದೆ. ಈ ಎಣ್ಣೆ ತಯಾರಿಕೆಗೆ ಕಾಡಿನಲ್ಲಿರುವ ಪಚ್ಚೆ ಕದಿರಸೊಪ್ಪು, ಬಿದಿರಸೊಪ್ಪು, ಹೊಂಗಾರೆಸೊಪ್ಪು, ನೆಲಕಂಚಿಸೊಪ್ಪು, ಕಾಟುಕಂಚಿ ಸೊಪ್ಪು, ಅಡ್ಕ ಬಾಳೆ ಸೊಪ್ಪು, ಪಾಸಿ ಗಿಡದ ಎಲೆ, ಕೂರಂಬಿಲ ಸೊಪ್ಪು ಸೇರಿದಂತೆ ಹಲವು ಸಸ್ಯಗಳ ರಸಗಳನ್ನು  ಬಳಸಲಾಗುತ್ತದೆ.  ಗೋವಿಂದ ಭಟ್ಟರ ತಾಯಿ ದಿ.ಶಾರದಾ ಅಮ್ಮನವರು ಉಗುರು ಸುತ್ತಿಗೆ ಔಷಧೀಯ ಎಣ್ಣೆಯನ್ನು ಕಾಯಿಸುತ್ತಿದ್ದರು. ಈ ಔಷಧೀಯ ಎಣ್ಣೆಯ ತಯಾರಿಕೆಯ ಜ್ಞಾನ ಗೋವಿಂದ ಭಟ್ಟರಿಗೂ ಇದೆ.

ಇಂತಹ ಹಲವು ಪಾರಂಪರಿಕ ಔಷಧ ಪದ್ಧತಿಗಳ ಬಗೆಗೆ ಜ್ಞಾನ ಹಾಗೂ ಹೆಚ್ಚಿನ ಸಸ್ಯಗಳ ಪರಿಚಯ ಹಾಗೂ ಅವುಗಳ ಮಹತ್ವದ ಅರಿವು ಈ ಸಹೋದರರಲ್ಲಿ ಉಳಿದುಕೊಂಡಿದೆ, ಹೀಗಾಗಿ ಕಾಡು ಹಾಗೂ ಸಸ್ಯ ಸಂಪತ್ತು ಮಹತ್ವದ್ದು ಎಂಬುದು ಇವರ ಮನೋಭಾವ.

ಈ ಪರಂಪರೆಯ ಮುಂದುವರಿಕೆಯಾಗಿ ಶಂಕರನಾರಾಯಣ ಭಟ್ಟರ ಪುತ್ರ ಆಯುರ್ವೇದ ವೈದ್ಯರಾದ  ಮಹೇಶ್ ಪಿ.ಎಸ್. ಅವರೂ  ಕಾಡಿನ ಸಂರಕ್ಷಣೆಯ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಈ ಕುಟುಂಬದಲ್ಲಿ ಮರ-ಗಿಡಗಳನ್ನು ಕೇವಲ ಸಂಪನ್ಮೂಲಗಳಾಗಿ ನೋಡದೆ, ಅವುಗಳ ಔಷಧೀಯ, ಪರಿಸರ ಹಾಗೂ ಸಾಂಸ್ಕøತಿಕ ಮಹತ್ವವನ್ನು ಅರಿತು ಸಂರಕ್ಷಿಸುವ ಪರಂಪರೆ ತಲೆಮಾರುಗಳಿಂದ ಮುಂದುವರಿದಿದೆ.

ಐನೂರಕ್ಕೂ ಹೆಚ್ಚು ಸಸ್ಯಜಾತಿಗಳ ವೈವಿಧ್ಯ:


ಈ ಕಾಡಿನ ಪ್ರಮುಖ ವೈಶಿಷ್ಟ್ಯ ಇಲ್ಲಿನ ಅಪಾರ ಸಸ್ಯವೈವಿಧ್ಯ. ಪ್ರಾಥಮಿಕವಾಗಿ ಗುರುತಿಸಿರುವ ಮಾಹಿತಿಯ ಪ್ರಕಾರ ಇಲ್ಲಿ ಐನೂರಕ್ಕೂ ಹೆಚ್ಚು ಜಾತಿಯ ಮರಗಳು ಮತ್ತು ಸಸ್ಯಗಳು ಕಂಡುಬರುತ್ತವೆ.

ಇಲ್ಲಿ ಕಂಡುಬರುವ ಪ್ರಮುಖ ಮರಗಳಲ್ಲಿ  ಹಲಸು, ಮಾವು, ತೇಗ, ಬೀಟೆ, ನೆಲ್ಲಿ, ಹೊನ್ನೆ , ನೇರಳೆ, ಪಾಲೆ,  ಮತ್ತಿ, ಬಸರಿ, ಆಲ, ಅತ್ತಿ, ಇತ್ತಿ, ಪಾಲಾಶ, ಹುಣಸೆ, ಹೊಂಗೆ, ಅಣಿಲೆ, ಕರಿಮತ್ತಿ ಅಥವಾ ಬನ್ಪು, ಮಹಾಗನಿ, ಜಂಬೆ, ಸೀಗೆಕಾಯಿ, ಕಾಸರಕ, ಬಿಳಿಮತ್ತಿ/ಹೊಳೆ ಮತ್ತಿ, ನರುವೋಳ/ನೊರೆಕಾಯಿ, ದೀವಿ ಹಲಸು ಸೇರಿದಂತೆ  ಸಾಮಾನ್ಯವಾಗಿ ಕಂಡುಬರುವ ಹಲವಾರು ಮರಗಳು ಈ ಪರಿಸರದಲ್ಲಿದೆ.

ಇದಲ್ಲದೆ, ಪಶ್ಚಿಮ ಘಟ್ಟದ ವಿಶಿಷ್ಟ ಸಸ್ಯಸಂಪತ್ತಿನ ದೃಷ್ಟಿಯಿಂದಲೂ ಈ ಪರಿಸರ ಮಹತ್ವದ್ದಾಗಿದೆ. ಸ್ಥಳೀಯ ಪ್ರಬೇಧಗಳಾದ ಕೋಕಂ, ಉಪ್ಪಾಗೆ ಮೊದಲಾದವುಗಳ ಜೊತೆಗೆ ಹಲವು ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ಸಸ್ಯ ಪ್ರಬೇಧಗಳನ್ನೂ ಕಾಣಬಹುದು. ಧೂಪದ ಮರ, ರಾಮಪತ್ರೆ/ಕಾಡು ಜಾಯಿಕಾಯಿ ಮೊದಲಾದವು ಅಳಿವಿನಂಚಿನಲ್ಲಿರುವ ಸ್ಥಳೀಯ ಸಸ್ಯಗಳಾದರೆ, ಕುಳುಮ್ಮಾವಿನಂತಹ ಅಪಾಯಕ್ಕೆ ಒಳಗಾಗಬಹುದಾದ ಪ್ರಬೇಧಗಳು ಹಾಗೆಯೇ ವಾಟೆಹುಳಿ/ ಉಂಡೆಹುಳಿಯಂತಹ ಅಪಾಯದ ಸಮೀಪದಲ್ಲಿರುವ ಸಸ್ಯ ಪ್ರಬೇಧಗಳು ಇಲ್ಲಿವೆ. ಹೊಂಗಾರೆ ಮರ, ಚೆನ್ನೆಕಾಯಿ ಮರ, ಅರಿಮರ, ಕೊರಜ್ಜಿ, ಬಾಜಿ, ಮುಚ್ಚಿರೆ, ಬೆರು, ವಾತಂಕೊಳ್ಳಿ, ಕಣ್ಪಟ್ಟಿ, ಬೊಳ್ಪಾಲೆ, ಕಲ್ಮರ, ಪಿಲಿಂಗುರಿ, ಬೇಂಗ, ರೆಂಜೆ, ಕುಂಟಾಲ, ಉರಿಪ್ಪು, ಸಮುದ್ರ ಮಾಫಲ ಸೇರಿದಂತೆ ಹಲವು ಗಮನಾರ್ಹ ಮರಗಳು ಇಲ್ಲಿವೆ. ಮರಗಳೊಂದಿಗೆ ವಿವಿಧ ಔಷಧೀಯ ಸಸ್ಯಗಳು ಇಲ್ಲಿವೆ. ಮುಖ್ಯವಾಗಿ ರೆಡ್ ಲಿಸ್ಟ್ ನಲ್ಲಿ  ಅಳಿವಿನಂಚಿನಲ್ಲಿರುವ ಸಸ್ಯ ಎಂದು ವರ್ಗೀಕರಿಸಲಾದ ಗರುಡ ಪಾತಾಳ ಇಲ್ಲಿನ ನೈಸರ್ಗಿಕ ಕಾಡಿನಲ್ಲಿದೆ. ಬಳ್ಳಿಗಳು, ಉಭಯವಾಸಿ ಸಸ್ಯಗಳು, ಪಾಚಿ ಸಸ್ಯಗಳು, ಜರಿಗಿಡಗಳು, ನೀರಿನ ಒಳಗೆ ಬೆಳೆಯುವ ಸಸ್ಯಗಳು, ಪರಾವಲಂಬಿ ಸಸ್ಯಗಳು, ಅನಾವೃತ ಬೀಜ ಸಸ್ಯಗಳು, ಶಿಲೀಂಧ್ರಗಳು, ಆರ್ಕಿಡ್ ಗಳು, ನೆಲಮಟ್ಟದಲ್ಲಿ ಬೆಳೆಯುವ ಸಸ್ಯವರ್ಗಗಳೂ  ಸೇರಿದಂತೆ ಸಸ್ಯಗಳ ವಿವಿಧ ಗುಂಪುಗಳೂ ಇಲ್ಲಿ ಕಂಡುಬರುತ್ತವೆ. ಇವುಗಳನ್ನು ಸಮಗ್ರವಾಗಿ ಗುರುತಿಸಿ ದಾಖಲಿಸಿದಲ್ಲಿ ಈ ಪ್ರದೇಶದಲ್ಲಿರುವ ಸಸ್ಯಜಾತಿಗಳ ಸಂಖ್ಯೆ ಸಾವಿರಕ್ಕೂಅಧಿಕವಾಗುವ ಸಾಧ್ಯತೆಯಿದೆ.


ಪಾಮ್ ಕುಟುಂಬಕ್ಕೆ ಸೇರಿದ 'ಪನೆಮರ' ಇಲ್ಲಿನ ಮುಖ್ಯ ಆಕರ್ಷಣೆ. ಇದೇ ಕಾರಣದಿಂದ ಈ ಸ್ಥಳಕ್ಕೆ ಪನೆಯಾಲ ಎಂಬ ಹೆಸರು ಬಂತೆಂಬ ಹೇಳಿಕೆ ಇದೆ. ಪನೆಮರ ಮಾತ್ರವಲ್ಲದೆ ಇದೇ ವರ್ಗಕ್ಕೆ ಸೇರಿದ ತಾಳೆ, ಈಂದು ಮರಗಳು ನೈಸರ್ಗಿಕವಾಗಿ ಕಂಡು ಬರುತ್ತದೆ. ಸಮಗ್ರ ವೈಜ್ಞಾನಿಕ ಸಮೀಕ್ಷೆ ಮತ್ತು ದಾಖಲಾತಿ ನಡೆಸಬಹುದಾದಂತಹ ಜೀವವೈವಿಧ್ಯಗಳ ತಾಣ ಇದಾಗಿದೆ ಎಂದರೂ ತಪ್ಪಲ್ಲ.

ವೈವಿಧ್ಯಮಯ ಜೀವಸಂಕುಲಕ್ಕೆ ಆಶ್ರಯ:

ಕಾಡು ಕೇವಲ ಸಸ್ಯಗಳಿಗೆ ಮಾತ್ರ ಆಶ್ರಯ ನೀಡದೆ, ಹಲವು ಬಗೆಯ ಜೀವಿಗಳಿಗೆ ನೈಸರ್ಗಿಕ ನೆಲೆಯಾಗಿದೆ. ಮುಂಗುಸಿ, ಅಳಿಲು, ಚಣಿಲು, ಕಾಡುಹಂದಿ, ಮುಳ್ಳುಹಂದಿ, ಮಂಗಗಳು ಸೇರಿದಂತೆ ವಿವಿಧ ಸಣ್ಣ ಸಸ್ತನಿಗಳು, ಸರೀಸೃಪಗಳು, ಚಿಟ್ಟೆಗಳು ಹಾಗೂ ಅನೇಕ ಕೀಟಗಳು ಇಲ್ಲಿ ಕಂಡುಬರುತ್ತವೆ.

ಪಕ್ಷಿ ವೈವಿಧ್ಯ ಇಲ್ಲಿನ ಮತ್ತೊಂದು ವಿಶೇಷ. ಟ್ರೀಪಿ, ಮಿನಿವೇಟ್‍ಗಳು, ಬಾರ್ಬೆಟ್‍ಗಳು, ಮೈನಾ, ಮಿಂಚುಳ್ಳಿಗಳು, ಟ್ರಾಗಾನ್ ಗಳು, ರಾಬಿನ್ ಗಳು, ಫ್ಲೈಕ್ಯಾಚರ್ ಗಳು, ಹಾರ್ನ್‍ಬಿಲ್ ಗಳು, ಮರಕುಟಿಕಗಳು, ಬುಲ್ಬುಲ್ ಗಳು, ಸನ್‍ಬರ್ಡ್ ಗಳು ಸೇರಿದಂತೆ ಹಲವು ಬಗೆಯ ಪಕ್ಷಿಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ದೊಡ್ಡ ಮರಗಳ ನೆರಳು, ಪೊದೆಗಳು, ಬಳ್ಳಿಗಳು, ನೆಲಮಟ್ಟದ ಸಸ್ಯಗಳು ಹಾಗೂ ವಿವಿಧ ಎತ್ತರಗಳಲ್ಲಿ ಬೆಳೆಯುವ ಸಸ್ಯವರ್ಗಗಳು ಸೇರಿ ಇಲ್ಲಿ ಬಹುಪದರದ ನೈಸರ್ಗಿಕ ಕಾಡಿನ ಪರಿಸರ ವ್ಯವಸ್ಥೆ ರೂಪುಗೊಂಡಿದೆ.


'ನಿಟ್ಟೋಣಿ' ಕಿರುಚಿತ್ರಕ್ಕೂ ಚಿತ್ರೀಕರಣ ತಾಣ:

ಪನೆಯಾಲದ ಈ ನೈಸರ್ಗಿಕ ಕಾಡಿನ ಸೌಂದರ್ಯ ಮತ್ತು ವೈಶಿಷ್ಟ್ಯಕ್ಕೆ ಮತ್ತೊಂದು ಸಾಕ್ಷಿಯಾಗಿ 'ನಿಟ್ಟೋಣಿ' ಕನ್ನಡ ಕಿರುಚಿತ್ರದ ಚಿತ್ರೀಕರಣವನ್ನು ಉಲ್ಲೇಖಿಸಬಹುದು. ಸೂರ್ಯ ಕಿನ್ನಿಂಗಾರ್ (ರಿಷಿ ಪ್ರಕಾಶ್) ಅವರ ಬರಹ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಕಿರುಚಿತ್ರದ ಚಿತ್ರೀಕರಣ ಪನೆಯಾಲದ ಈ ನೈಸರ್ಗಿಕ ಪರಿಸರದಲ್ಲಿಯೂ ನಡೆದಿದ್ದು, ಬಳಿಕ ಚಿತ್ರ ತೆರೆ ಕಂಡಿದೆ. ದಟ್ಟ ಹಸಿರು, ಹಳೆಯ ಮರಗಳು, ನೈಸರ್ಗಿಕ ಸಸ್ಯವರ್ಗ ಹಾಗೂ ಮಾನವ ಹಸ್ತಕ್ಷೇಪ ಕಡಿಮೆಯಿರುವ ಪರಿಸರವು ಚಿತ್ರತಂಡಕ್ಕೆ ವಿಶಿಷ್ಟ ಹಿನ್ನೆಲೆಯಾಗಿ ಒದಗಿಸಿದೆ.

ಜೇನು ಸಾಕಣೆ:

ಪನೆಯಾಲ ಗೋವಿಂದ ಭಟ್ ಅವರು ಸರಿಸುಮಾರು ನಾಲ್ಕು ದಶಕಗಳಿಂದ ಜೇನು ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸ್ಥಳೀಯವಾಗಿ ನಡೆದ ಜೇನು ಸಾಕಣೆ ತರಬೇತಿ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಅನುಭವವೂ ಇವರಿಗಿದೆ. ಇಲ್ಲಿ ಮುಖ್ಯವಾಗಿ ಮುಜಂಟಿ ಜೇನು ಹಾಗೂ ಪೆಟ್ಟಿಗೆ ಜೇನಿನ ಒಕ್ಕಲುಗಳಿವೆ. ಈ ಜೇನುಹುಳಗಳು ಕಾಡಿನಲ್ಲಿ ಅರಳುವ ಬೇರೆ ಬೇರೆ ಹೂಗಳ ಮಕರಂದ ಸಂಗ್ರಹಿಸಿ ಉತ್ತಮ ಗುಣಮಟ್ಟದ ಜೇನನ್ನು ತಯಾರಿಸುತ್ತವೆ ಎಂಬುದು ಹಲವರ ಅಭಿಪ್ರಾಯ.  

ಸಂರಕ್ಷಣೆಯ ಮಾದರಿ:

ನಗರೀಕರಣ, ಕೃಷಿ ವಿಸ್ತರಣೆ ಮತ್ತು ಭೂಬಳಕೆಯ ಬದಲಾವಣೆಗಳಿಂದ ನೈಸರ್ಗಿಕ ಕಾಡು ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಖಾಸಗಿ ಜಾಗದಲ್ಲಿದ್ದರೂ ಕಾಡನ್ನು ತೆರವುಗೊಳಿಸದೆ ಅದರ ಸ್ವಾಭಾವಿಕ ಸ್ವರೂಪವನ್ನು ಉಳಿಸಿಕೊಂಡಿರುವ ಪನೆಯಾಲದ ಈ ಪ್ರದೇಶ ಗಮನಾರ್ಹವಾಗಿದೆ. ಎರಡು ತಲೆಮಾರುಗಳಿಂದ ಕಾಡಿನ ಸ್ವರೂಪವನ್ನು ಕಾಪಾಡಿಕೊಂಡು ಬಂದಿರುವುದರಿಂದ, ಇಲ್ಲಿ ಕಾಲಕ್ರಮೇಣ ರೂಪುಗೊಂಡಿರುವ ಸಸ್ಯ ಮತ್ತು ಜೀವವೈವಿಧ್ಯವು ಅಧ್ಯಯನಕ್ಕೂ ಯೋಗ್ಯವಾಗಿದೆ.

ಪನೆಯಾಲದ ಈ ನೈಸರ್ಗಿಕ ಕಾಡು, ಪ್ರಕೃತಿಯನ್ನು ಕೇವಲ ಆರ್ಥಿಕ ಸಂಪನ್ಮೂಲವಾಗಿ ನೋಡದೆ ಪ್ರಕೃತಿ ಎಲ್ಲಾ ಜೀವಿಗಳಿಗೂ ಸೇರಿದ್ದು ಎಂಬ ಪರಿಸರ ಕಾಳಜಿಯನ್ನು ಬಿಂಬಿಸುತ್ತದೆ. ಮರಗಳನ್ನು ಕಡಿದು ಭೂಮಿಯನ್ನು ವಿಸ್ತರಿಸುವ ಬದಲು ಮರಗಳೊಂದಿಗೆ ಬದುಕುವ ಮಾರ್ಗವನ್ನು ಆರಿಸಿಕೊಂಡಿರುವ ಗೋವಿಂದ ಭಟ್ ಮತ್ತು ಅವರ ಕುಟುಂಬದ ಈ ಪ್ರಯತ್ನ, ಖಾಸಗಿ ಜಾಗದಲ್ಲಿಯೂ ನೈಸರ್ಗಿಕ ಅರಣ್ಯವನ್ನು ಸಂರಕ್ಷಿಸಬಹುದು ಎಂಬುದಕ್ಕೆ ಮಾದರಿಯಾಗಿದೆ.

ಈ ಪ್ರದೇಶದ ಸಸ್ಯ, ಪಕ್ಷಿ, ಪ್ರಾಣಿ, ಔಷಧೀಯ ಸಸ್ಯ ಮತ್ತು ಇತರ ಜೀವಸಂಕುಲಗಳ ವೈಜ್ಞಾನಿಕ ದಾಖಲಾತಿ ಹಾಗೂ ಸಂರಕ್ಷಣಾ ಕಾರ್ಯಗಳು ಇನ್ನಷ್ಟು ಬಲಗೊಂಡರೆ, ಪನೆಯಾಲದ ಈ ಕಾಡು ಸ್ಥಳೀಯ ಮಟ್ಟದಲ್ಲಿ ಮಹತ್ವದ ಜೈವವೈವಿಧ್ಯ ತಾಣವಾಗಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries