ಕಾಸರಗೋಡು: ಕೇರಳ ಸರ್ಕಾರ ಜ್ಯಾರಿಗೆ ತಂದಿರುವ ಮಲಯಾಳ ಭಾಷಾ ಕಡ್ಡಾಯ ಮಸೂದೆಯಿಂದಾಗಿ ಕಾಸರಗೋಡು ಪ್ರದೇಶದ ಕೆಥೋಲಿಕ್ ಕೊಂಕಣಿ ಕ್ರೈಸ್ತರ ಕೊಂಕಣಿ ಭಾಷೆಯು ಸಂಪೂರ್ಣವಾಗಿ ಅಳಿದು ಹೋಗುವ ಗಂಭೀರ ಆತಂಕ ಎದುರಾಗಿದ್ದು, ಈ ಸಂದಿಗ್ಧ ಪರಿಸ್ಥಿತಿಯ ಪರಿಹಾರಕ್ಕೆ ತಕ್ಷಣ ಮಧ್ಯಪ್ರವೇಶಿಸುವಂತೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪೌಲ್ ಸಾಲ್ದಾನ ಅವರನ್ನು ಮನವಿಮೂಲಕ ಆಗ್ರಹಿಸಲಾಯಿತು.
ಕಾಸರಗೋಡಿನ ಹಿರಿಯ ವಕೀಲ ಥಾಮಸ್ ಡಿ" ಸೋಜಾ ಅವರ ನೇತೃತ್ವದಲ್ಲಿ ಧರ್ಮಾಧ್ಯಕ್ಷರನ್ನು ಭೇಟಿಮಾಡಲಾಯಿತು. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಉನ್ನತಾಧಿಕಾರಿಗಳ ಗಮನ ಸೆಳೆಯುವಂತೆಯೂ ಮನವಿಯಲ್ಲಿ ಕೇಳಿಕೊಳ್ಳಲಾಯಿತು.
ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳನ್ನು ಒಳಗೊಂಡಿರುವ ಕಾಸರಗೋಡು ವಲಯದಲ್ಲಿ 16 ಧರ್ಮಕ್ಷೇತ್ರಗಳಿದ್ದು, 25 ಸಾವಿರಕ್ಕೂ ಅಧಿಕ ಕೊಂಕಣಿ ಕ್ರೈಸ್ತರಿದ್ದಾರೆ. ಭೌಗೋಳಿಕವಾಗಿ ಕೇರಳದಲ್ಲಿದ್ದರೂ, ಇಲ್ಲಿನ ಕೊಂಕಣಿ ಕ್ಯಾಥೋಲಿಕ್ ಸಮುದಾಯವು ಪೀಳಿಗೆಗಳಿಂದಲೂ ಆಧ್ಯಾತ್ಮಿಕವಾಗಿ, ಸಾಂಸ್ಕøತಿಕವಾಗಿ ಮತ್ತು ಧಾರ್ಮಿಕ ವಿಧಿವಿಧಾನಗಳ ದೃಷ್ಟಿಯಿಂದ ಮಂಗಳೂರು ಧರ್ಮಪ್ರಾಂತ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇಲ್ಲಿನ ಇಗರ್ಜಿಗಳಲ್ಲಿ ಬಳಸುವ ಪ್ರಾರ್ಥನಾ ಪುಸ್ತಕಗಳು, ಆರಾಧನಾ ಗ್ರಂಥಗಳು, ಭಜನೆಗಳು, ಧರ್ಮೋಪದೇಶ ಗ್ರಂಥಗಳು, ಬೈಬಲ್ ಹಾಗೂ ಪವಿತ್ರ ಬಲಿಪೂಜೆಯ ಪಠ್ಯಗಳು ಎಲ್ಲವೂ ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟ ಕೊಂಕಣಿ ಭಾಷೆಯಲ್ಲಿವೆ. ಆದ್ದರಿಂದ ಕನ್ನಡ ಭಾಷೆಯ ಅಧ್ಯಯನವು ಕೇವಲ ಶೈಕ್ಷಣಿಕ ಆಯ್ಕೆಯಲ್ಲ. ಅದು ನಮ್ಮ ಧಾರ್ಮಿಕ ನಂಬಿಕೆ, ಆರಾಧನಾ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವುದಾಗಿದೆ. ಆದರೆ ಕೇರಳ ಸರ್ಕಾರವು 2025ರ ಮಲಯಾಳಂ ಭಾಷಾ ಮಸೂದೆಯ ಮೂಲಕ ಶಾಲೆಗಳಲ್ಲಿ ಹಾಗೂ ಅಧಿಕೃತ ವ್ಯವಹಾರಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವುದರಿಂದ ಕಾಸರಗೋಡು ವಲಯದ ಕೊಂಕಣಿ ಕ್ರೈಸ್ತರಿಗೂ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಗಮನಹರಿಸುವಂತೆ ಮನವಿ ಮೂಲಕ ಸೂಚಿಸಲಾಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ, ಕನ್ನಡ ಕಾರ್ಯಕರ್ತ ರಾಜೇಶ್ ಕುದ್ರೆಪ್ಪಾಡಿ ಜತೆಗಿದ್ದರು.



