ಪೆರ್ಲ: ದೇಶದ ಅಭಿವೃದ್ಧಿಯಲ್ಲಿ ಕ್ಯಾಂಪ್ಕೋ ಪಾತ್ರ ಮಹತ್ವದ್ದಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ತಿಳಿಸಿದ್ದಾರೆ. ಅವರು ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಕ್ಯಾಂಪೆÇ್ಕ ಪ್ರಾದೇಶಿಕ ಕಚೇರಿ ಬದಿಯಡ್ಕ ಪೆರ್ಲ ಶಾಖೆ(ಬದಿಯಡ್ಕ-ನೀರ್ಚಾಲು ಶಾಖೆ ಸೇರಿದಂತೆ)ಸದಸ್ಯ ಬೆಳೆಗಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರೊನಾದಂತಹ ಸಂಕಷ್ಟದ ಸನ್ನಿವೇಶದಲ್ಲೂ ಅಡಕೆ ಬೆಳೆಗಾರರಿಗೆ ಬೆನ್ನೆಲುಬಾಗಿ ನಿಂತ ಕ್ಯಾಂಪ್ಕೋ ಸಂಸ್ಥೆ ಉಳಿದ ದಿವಸಗಳಲ್ಲೂ ಕೃಷಿಕರನ್ನುಕೈಹಿಡಿದು ಮುನ್ನಡೆಸುತ್ತಾ ಬಂದಿದೆ. ಕ್ಯಾಂಪ್ಕೋದ ಚಾಕೋಲೇಟ್ ಫ್ಯಾಕ್ಟರಿ ಸಹಕಾರಿ ವಲಯದ ಹೆಗ್ಗುರುತಾಗಿ ಬೆಳೆದುನಿಂತಿದೆ. ದೇಶದ ಹತ್ತು ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡದ ಹೆಸರೂ ಒಳಗೊಳ್ಳಲು ಅವಿಭಜಿತ ದ.ಕ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆಯೂ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು. ಕೃಷಿಕರು ಅಡಕೆಯ ಜತೆಗೆ ಉಪ ಬೆಳೆಗಳತ್ತ ಗಮನಹರಿಸುವ ಮೂಲಕ ಮಿಶ್ರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಕೃಷಿಕ, ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್ ಸೇರಿದಂತೆ ಹಿರಿಯ ಕೃಷಿಕರು ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೃಷಿಕರ ಪ್ರಶ್ನೆಗಳಿಗೆ ಎಸ್. ಆರ್ ಸತೀಶ್ಚಂದ್ರ ಉತ್ತರ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ, ಪತ್ರಕರ್ತ ಶಂಕರ್ ಸಾರಡ್ಕ ಅವರು ಕ್ಯಾಂಪ್ಕೋ ಸ್ಥಾಫಕಾಧ್ಯಕ್ಷ, ಹಿರಿಯ ಸಹಕಾರಿ ಧುರೀಣ ವಾರಣಾಸಿ ಸುಬ್ರಾಯ ಭಟ್ ಅವರ ಬಗ್ಗೆ ಮಾಹಿತಿ ನೀಡಿದರು. ಕ್ಯಾಂಪ್ಕೋ ನಿರ್ದೇಶಕರಾದ ರಾಧಾಕೃಷ್ಣನ್, ಎಸ್.ಎನ್ ಪ್ರಸಾದ್, ಸತೀಶ್ಚಂದ್ರ ಭಂಡಾರಿಕೋಳಾರು, ವಿಘ್ನೇಶ್ವರ ಭಟ್‍ಮ ಸೌಮ್ಯಾ ಪ್ರಸಕಶ್, ಗಣೇಶ್ ಪಾರೆಕಟ್ಟ, ಮುರಳೀಕೃಷ್ಣ ಕೆ.ಎಸ್, ಮಹಾಪ್ರಬಂಧಕಿ ರೇಶ್ಮಾ ಮಲ್ಯ, ಡಿಜಿಎಂ ಗೋವಿಂದ ಭಟ್, ಕೃಷಿ ಅಧಿಕಾರಿ ಕೃಷ್ಣ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕ ಚಂದ್ರಾ ಎಂ, ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಭಟ್ ಪತ್ತಡ್ಕ, ಕ್ಯಾಂಪ್ಕೋ ಉಪಾಧ್ಯಕ್ಷ ಶಂನಾ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ಸ್ವಾಗತಿಸಿದರು. ಪವನ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಯಾಂಪ್ಕೋ ನಿರ್ದೇಶಕ ವೆಂಕಟ್ರಮಣ ಭಟ್ ಎಡಮಲೆ ವಂದಿಸಿದರು.



