ಕಾಸರಗೋಡು: ಆಸ್ಪತ್ರೆಗೆ ನೇರವಾಗಿ ಬರಲು ಕಷ್ಟಪಡುವ ರೋಗಿಗಳಿಗೆ ಮನೆಯಲ್ಲೇ ಆಸ್ಪತ್ರೆ ಮಾದರಿಯ ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸುವ ವಿನೂತನ 'ಆಸ್ಟರ್ @ ಹೋಮ್'ಯೋಜನೆಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆ ಚಾಲನೆ ನೀಡಲಿದ್ದು, ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಜೂ. 14ರಂದು ಯೋಜನೆ ಉದ್ಘಾಟಿಸಲಿದ್ದಾರೆ ಎಂದು ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್ ಸುಧೀರ್ ಬಾಸುರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಆಸ್ಪತ್ರೆಯ ಸುತ್ತಮುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿರಲಿದೆ. ಪ್ರಾಥಮಿಕ ತಪಾಸಣೆ ಜತೆಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಪ್ರಮುಖ ಚಿಕಿತ್ಸಾ ಸೌಲಭ್ಯಗಳನ್ನು ರೋಗಿಯ ಮನೆ ಬಾಗಿಲಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ತಜ್ಞ ವೈದ್ಯರು, ರೆಸಿಡೆಂಟ್ ಮೆಡಿಕಲ್ ಆಫೀಸರ್ಸ್, ಅನುಭವಿ ದಾದಿಯರು (ನರ್ಸ್) ಮತ್ತು ಅಟೆಂಡೆಂಟ್‍ಗಳನ್ನು ಒಳಗೊಂಡ ಪರಿಣಿತ ವೈದ್ಯಕೀಯ ತಂಡವು ರೋಗಿಗಳ ಮನೆಗೆ ಭೇಟಿ ನೀಡಲಿದೆ.
ಜೆರಿಯಾಟ್ರಿಕ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಶಹನಾದ್ ಪಿ.ಎಂ.ಎ ನೇತೃತ್ವದ ಈ ಯೋಜನೆಯನ್ವಯ ಮುಂಚಿತವಾಗಿ ಬುಕ್ ಮಾಡುವ ರೋಗಿಗಳ ಮನೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಹೋಮ್ ಕೇರ್ ತಂಡ ತಲುಪಲಿದೆ. ತಂಡ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿದೆ.ವಯೋಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದವರು, ಪಾಶ್ರ್ವವಾಯು (ಪ್ಯಾರಾಲಿಸಿಸ್) ಪೀಡಿತರು ಮತ್ತು ಮೂಳೆ ಮುರಿತದಿಂದಾಗಿ ಚಲಿಸಲಾಗದ ರೋಗಿಗಳಿಗೆ ವಿಶೇಷ ಕಾಳಜಿ ಮತ್ತು ಫಿಸಿಯೋಥೆರಪಿ ಸೇವೆಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚೀಫ್ ಮೆಡಿಕಲ್ ಸೂಪರಿಂಟೆಂಡೆಂಟ್ ಹಾಗೂ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸಾಜಿದ್ ಸಲಾಹುದ್ದೀನ್, ಅರಿವಳಿಕೆ (ಅನಸ್ತೇಷಿಯಾ) ವಿಭಾಗದ ಮುಖ್ಯಸ್ಥ ಡಾ. ಅಮೀನ್ ಗುಲ್ಷನ್, ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಶಹನಾದ್ ಪಿ.ಎಂ.ಎ ಉಪಸ್ಥಿತರಿದ್ದರು.

