ವಾಷಿಂಗ್ಟನ್: ತಮ್ಮಲ್ಲಿರುವ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಹಸ್ತಾಂತರಿಸಲು ಇರಾನ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದದ ಸನಿಹದಲ್ಲಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.
ಇನ್ನು. ತನ್ನಲ್ಲಿರುವ ಯುರೇನಿಯಂ ದಾಸ್ತಾನನ್ನು ಬಿಟ್ಟುಕೊಡುವ ಬಗ್ಗೆ ಇರಾನ್ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಈ ನಡುವೆ, ಅಮೆರಿಕ ಮತ್ತು ಇರಾನ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ ಏರ್ಪಡಿಸಲು ಪಾಕಿಸ್ತಾನ ಸಜ್ಜಾಗಿದೆ.
ಒಪ್ಪಂದಕ್ಕೆ ಬಾರದಿದ್ದರೆ ಮರು ದಾಳಿ:
ಶಾಂತಿ ಒಪ್ಪಂದಕ್ಕೆ ಇರಾನ್ ಸಮ್ಮತಿಸದಿದ್ದರೆ, ಅದರ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸುವುದಾಗಿ ಮತ್ತು ದಿಗ್ಭಂದನವನ್ನು ಮುಂದುವರಿಸುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ, ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಜಾರಿಗೆ ಬಂದಿದ್ದು, ಎರಡೂ ದೇಶಗಳ ನಾಯಕರು ನಾಲ್ಕೈದು ದಿನಗಳಲ್ಲಿ ಶ್ವೇತಭವನಕ್ಕೆ ಆಗಮಿಸುವ ನಿರೀಕ್ಷೆಯಿದೆ.

