ನವದೆಹಲಿ: ವಿರೋಧ ಪಕ್ಷಗಳು, ಹೋರಾಟಗಾರರ ತೀವ್ರ ವಿರೋಧದ ನಡುವೆಯೂ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.
ಮಾರ್ಚ್ 25ರಂದು ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ-2019ಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ, ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ- 2026ಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿತ್ತು.
ಇದೀಗ ರಾಷ್ಟ್ರಪತಿ ಮುರ್ಮು ಅವರು ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಕುರಿತ ವ್ಯಾಖ್ಯಾನವು ಅಸ್ಪಷ್ಟವಾಗಿದ್ದು, ನಿಜವಾದ ಸಂತ್ರಸ್ತರನ್ನು ಗುರುತಿಸಿ, ಅವರಿಗೆ ಕಾಯ್ದೆಯ ಪ್ರಯೋಜನಗಳನ್ನು ದೊರಕಿಸುವುದು ಅಸಾಧ್ಯವಾಗಿದೆ. ತಮ್ಮ ಯಾವ ತಪ್ಪೂ ಇಲ್ಲದೇ ಜೈವಿಕ ಕಾರಣದಿಂದ ತೀವ್ರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವಂಥವರ ಹಕ್ಕುಗಳನ್ನು ಮಾತ್ರವೇ ರಕ್ಷಣೆ ಮಾಡುವುದು ಮಸೂದೆಯ ಉದ್ದೇಶ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.
ಸಲಿಂಗಿ ಮತ್ತು ಲೆಸ್ಬಿಯನ್ನರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಯನ್ನು ವಿರೋಧ ಪಕ್ಷಗಳ ಸಂಸದರು ಟೀಕಿಸಿದ್ದರು.
ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ-2019ರಲ್ಲಿ ಏನಿತ್ತು...
2019ರ ಕಾಯ್ದೆಯ ಪ್ರಕಾರ, ಲಿಂಗತ್ವ ಅಲ್ಪಸಂಖ್ಯಾತರು ಎಂದರೆ, ಹುಟ್ಟಿನಿಂದ ದತ್ತವಾದ ಲಿಂಗತ್ವಕ್ಕಿಂತ ಭಿನ್ನವಾದ ಲಿಂಗತ್ವ ಹೊಂದಿರುವವರು. ಹುಟ್ಟಿದಾಗ ಗಂಡಾಗಿದ್ದು ನಂತರ ಹೆಣ್ಣಾಗಿರಬಹುದು (ಟ್ರಾನ್ಸ್ ವುಮನ್), ಹುಟ್ಟಿದಾಗ ಹೆಣ್ಣಾಗಿ ನಂತರ ಗಂಡಾಗಿರಬಹುದು (ಟ್ರಾನ್ಸ್ ಮೆನ್), ಅಂತರಲಿಂಗತ್ವ ಹೊಂದಿರಬಹುದು, ಇಲ್ಲವೇ ಕಿನ್ನರ್, ಹಿಜ್ರಾ, ಅರವಣೆ, ಮತ್ತು ಜೋಗತಿ-ಇಂಥ ಸಾಮಾಜಿಕ ಸಾಂಸ್ಕೃತಿಕ ಚಹರೆಗಳನ್ನು ಹೊಂದಿರುವವರು. ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ, ಲೇಸರ್ ಥೆರಪಿ, ಹಾರ್ಮೋನ್ ಥೆರಪಿ ಇತ್ಯಾದಿಗಳಿಗೆ ಒಳಗಾಗಿರಬಹುದು ಇಲ್ಲದಿರಬಹುದು, ಎಲ್ಲರನ್ನೂ ವಿಶಾಲ ಅರ್ಥದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಂದೇ ಗುರುತಿಸಲಾಗುತ್ತಿತ್ತು.
2019ರ ಕಾಯ್ದೆಯಲ್ಲಿನ ಕೆಲವು ವಿಚಾರಗಳಲ್ಲಿ ಗೊಂದಲಗಳಿದ್ದು, ಅವು ಕಾಯ್ದೆ ಜಾರಿಗೆ ಅಡ್ಡಿಯಾಗಿವೆ. ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಯಾರು, ಅವರನ್ನು ಹೇಗೆ ಗುರುತಿಸಲಾಗುತ್ತಿದೆ ಎನ್ನುವ ಅಂಶಗಳು ಕಾಯ್ದೆ ಜಾರಿಯಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರವು ಹೇಳಿದೆ. ಈ ಅಂಶಗಳನ್ನು ಮಸೂದೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯ ಬಗ್ಗೆಯೇ ಲಿಂಗತ್ವ ಅಲ್ಪಸಂಖ್ಯಾತರು ಆಕ್ಷೇಪಣೆ ಎತ್ತಿರುವುದು.
ಸ್ವಯಂ ಗುರುತಿಸಿಕೊಳ್ಳುವಿಕೆ ರದ್ದು: ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಲಿಂಗತ್ವದ ಗ್ರಹಿಕೆಯ ಆಧಾರದ ಮೇಲೆ ಲಿಂಗತ್ವ ಅಲ್ಪಸಂಖ್ಯಾತರೆಂದು ಸ್ವಯಂ ಗುರುತಿಸಿಕೊಳ್ಳಲು 2019ರ ಕಾಯ್ದೆಯ ಸೆಕ್ಷನ್ 4 (2) ಅವಕಾಶ ಕಲ್ಪಿಸಿತ್ತು. ತಿದ್ದುಪಡಿ ಮಸೂದೆಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ.
ತಿದ್ದುಪಡಿ ಮಸೂದೆಯಲ್ಲಿ 'ಲಿಂಗತ್ವ ಅಲ್ಪಸಂಖ್ಯಾತ'ರು ಎಂದರೆ ಯಾರು ಎನ್ನುವುದನ್ನು ಸೀಮಿತವಾಗಿ ವ್ಯಾಖ್ಯಾನಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ಎಂದರೆ, ಜೈವಿಕ ಕಾರಣಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿರುವ ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಸಮುದಾಯಗಳಿಗೆ ಸೇರಿದವರು, ಅಂತರಲಿಂಗಿಗಳು, ನಿರ್ದಿಷ್ಟ ದೈಹಿಕ ಚಹರೆಗಳನ್ನು ಹೊಂದಿರುವವರು, ಶಸ್ತ್ರಚಿಕಿತ್ಸೆಗೆ ಒಳಗಾದವರು.

