ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಚುನಾವಣೆಗಳ ಒತ್ತಡದಿಂದ ಪ್ರಕ್ರಿಯೆಯನ್ನು ವಿಕೃತಗೊಳಿಸಬಾರದು ಎಂದು ಎಚ್ಚರಿಸಿದೆ.
ಮತದಾರರು ಮತದಾರರ ಪಟ್ಟಿಯಲ್ಲಿ ಉಳಿಯುವ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರ ಮೇಲ್ಮನವಿಗಳ ವಿಚಾರಣೆಯ ನಡುವೆ ಸಲ್ಲಿಸಲಾದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿತು.
ಅರ್ಜಿದಾರರು, ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ನಿಗದಿಪಡಿಸಿರುವ ಕಟ್-ಆಫ್ ದಿನಾಂಕವನ್ನು ವಿಸ್ತರಿಸಬೇಕು ಎಂದು ಕೋರಿದ್ದಾರೆ. ತಮ್ಮ ಮೇಲ್ಮನವಿಗಳು ಅನುಕೂಲಕರವಾಗಿ ತೀರ್ಮಾನವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬೇಕು ಎಂಬದು ಅವರು ವಾದಿಸಿದರು.
ಭಾರತೀಯ ಚುನಾವಣಾ ಆಯೋಗ (ಇಸಿಐ) ಎಪ್ರಿಲ್ 9ರಿಂದ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಪೀಠ, "ಮತದಾರರ ಪಟ್ಟಿಯಲ್ಲಿ ಉಳಿಯುವುದು ಕೇವಲ ಕಾನೂನು ಹಕ್ಕು ಮಾತ್ರವಲ್ಲ, ಭಾವನಾತ್ಮಕ ಹಕ್ಕು ಕೂಡ. ಅದನ್ನು ಕಾಪಾಡುವುದು ಅಗತ್ಯ. ಚುನಾವಣೆಗಳ ಆತುರದಿಂದ ನಾವು ಕುರುಡರಾಗಲು ಸಾಧ್ಯವಿಲ್ಲ," ಎಂದು ಹೇಳಿತು.
ಆರಂಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಹಿಂಜರಿದರೂ, ಬಾಕಿ ಮೇಲ್ಮನವಿಗಳನ್ನು ನ್ಯಾಯಮಂಡಳಿಗಳು ತೀರ್ಮಾನಿಸಲು ಅವಕಾಶ ನೀಡಬೇಕು ಎಂದು ಸೂಚಿಸಿತು. ಆದರೆ ಅರ್ಜಿದಾರರ ಪರ ವಕೀಲರು, ಅಗತ್ಯ ದಾಖಲೆಗಳನ್ನು ಸಲ್ಲಿಸುವಲ್ಲಿ ಚುನಾವಣಾ ಆಯೋಗ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಬಾಗ್ಚಿ, "ಮತದಾರರ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಲು ಬಲವಾದ ಮೇಲ್ಮನವಿ ವ್ಯವಸ್ಥೆ ಅಗತ್ಯ," ಎಂದು ಹೇಳಿದರು.
ಪೀಠವು ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೆಲವು ವಿಚಲನಗಳಿರುವುದನ್ನೂ ಗಮನಿಸಿದೆ. "ತಾರ್ಕಿಕ ವ್ಯತ್ಯಾಸ" ಎಂಬ ಹೊಸ ವರ್ಗವನ್ನು ಪರಿಚಯಿಸಿರುವುದನ್ನು ಉಲ್ಲೇಖಿಸಿದೆ.
"2002ರ ಮತದಾರರನ್ನು ದಾಖಲೆಗಳಿಲ್ಲದೆ ಉಳಿಸುವುದಾಗಿ ನೀವು ಹಿಂದಿನ ಪ್ರಕರಣದಲ್ಲಿ ಹೇಳಿದ್ದೀರಿ. ಆದರೆ ಇಲ್ಲಿ ಅದನ್ನು ಹೇಗೆ ನೋಡಲಾಗಿದೆ?" ಎಂದು ಪೀಠವು ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
ದಾಖಲೆಗಳ ಪರಿಶೀಲನೆ ವೇಳೆ ದೋಷಗಳ ಸಾಧ್ಯತೆ ಇರುವುದನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ. "ದಿನಕ್ಕೆ ಸಾವಿರ ದಾಖಲೆಗಳನ್ನು ಪರಿಶೀಲಿಸಿದರೆ ತಪ್ಪುಗಳ ಸಂಭವ ಸಹಜ. ಅದಕ್ಕಾಗಿ ದೃಢವಾದ ಮೇಲ್ಮನವಿ ವ್ಯವಸ್ಥೆ ಅಗತ್ಯ," ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಎಪ್ರಿಲ್ 23 ಮತ್ತು 29ರಂದು ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.

