ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸ್ಥಾಪಿಸಿದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವಂತರಾ, ಗುಜರಾತ್‌ನ ಜಾಮ್‌ನಗರದಲ್ಲಿ 'ವನ್ಯಜೀವಿ ವಿಶ್ವವಿದ್ಯಾಲಯ' ಪ್ರಾರಂಭಿಸುವುದಾಗಿ ಶುಕ್ರವಾರ ಘೋಷಿಸಿದೆ.
ಇದು ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾಗಿರುವ ವಿಶ್ವದ ಮೊದಲ ವಿಶ್ವವಿದ್ಯಾಲಯವಾಗಲಿದೆ.
ಇದು ವನ್ಯಜೀವಿಗಳ ಆರೈಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಉನ್ನತ ಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡಲಿದೆ.
ಈ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು, ಪ್ರಪಂಚದಾದ್ಯಂತದ ಯುವಜನರನ್ನು ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಅವುಗಳ ಸೇವೆ ಮಾಡಲು ಆಕರ್ಷಿಸುವುದು ಇದರ ಉದ್ದೇಶವಾಗಿದೆ.
ಪ್ರಮುಖ ಉದ್ದೇಶಗಳು:
ಪಶುವೈದ್ಯಕೀಯ ಔಷಧ, ವನ್ಯಜೀವಿಗಳ ಸಂರಕ್ಷಣೆ ಮತ್ತು ಆರೈಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವುದು ಈ ಸಂಸ್ಥೆಯ ಗುರಿಯಾಗಿದೆ.
ಇದರ ಪಠ್ಯಕ್ರಮವನ್ನು ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯನ್ನು ಬಳಸಿಕೊಂಡು, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಮಾದರಿಯನ್ನು ರಚಿಸಲಾಗುತ್ತದೆ.
ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, ಕರುಣೆ, ಜ್ಞಾನ ಮತ್ತು ಕೌಶಲ್ಯದಿಂದ ಜೀವಿಗಳಿಗೆ ಸೇವೆ ಸಲ್ಲಿಸಲು ನಾವು ಹೇಗೆ ಸಿದ್ಧರಾಗುತ್ತೇವೆ ಎಂಬುವುದು ಮುಖ್ಯ. ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ನೋಡಿ, ಅವುಗಳ ಆರೈಕೆಗೆ ಹೆಚ್ಚಿನ ಸೌಲಭ್ಯ ಅಗತ್ಯವಿದೆ ಎಂದು ಮನಗಂಡ ನಂತರ ಈ 'ವಂತಾರಾ ವಿಶ್ವವಿದ್ಯಾಲಯ'ಕ್ಕೆ ರೂಪ ನೀಡಲಾಗಿದೆ.
ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ ತತ್ವಗಳು ಮತ್ತು 'ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ' (ಅಂದರೆ ಎಲ್ಲಾ ದಿಕ್ಕುಗಳಿಂದಲೂ ಉದಾತ್ತ ಆಲೋಚನೆಗಳು ನಮಗೆ ಬರಲಿ) ಎಂಬ ಧ್ಯೇಯವಾಕ್ಯದಿಂದ ಸ್ಫೂರ್ತಿ ಪಡೆದು, ಪ್ರತಿ ಜೀವಿಯನ್ನು ರಕ್ಷಿಸಲು ಬದ್ಧವಾಗಿ ಮತ್ತು ಹೊಸ ಪೀಳಿಗೆಯನ್ನು ಪೋಷಿಸಲು ಈ ವಿಶ್ವವಿದ್ಯಾಲಯ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.
ಶಿಲಾನ್ಯಾಸ ಸಮಾರಂಭದಲ್ಲಿ ಶಿಕ್ಷಣ ತಜ್ಞರು, ವಿಜ್ಞಾನಿಗಳು ಸೇರಿದಮತೆ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಮುಖ ಲಕ್ಷಣಗಳು
ಪರಿಸರ ಸ್ನೇಹಿ ಅಡಿಪಾಯ: ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳ ವಿವಿಧ ಕಾಡುಗಳು, ಜೌಗು ಪ್ರದೇಶಗಳು, ಹುಲ್ಲುಗಾವಲುಗಳು ಮತ್ತು ಹಿಮಾಲಯದ ಎತ್ತರದ ಪ್ರದೇಶಗಳಿಂದ ಮಣ್ಣು, ನೀರು ಮತ್ತು ಕಲ್ಲುಗಳನ್ನು ಸಂಗ್ರಹಿಸಿ ಅಡಿಪಾಯ ಹಾಕುವ ಮೂಲಕ ದೇಶದ ನೈಸರ್ಗಿಕ ಪರಂಪರೆಯನ್ನು ಗೌರವಿಸಲಾಗಿದೆ.
ಪ್ರಾಯೋಗಿಕ ಶಿಕ್ಷಣ: ಪ್ರಾಣಿಗಳನ್ನು ರಕ್ಷಿಸುವಾಗ ಪಡೆದ ಅನುಭವವನ್ನು ಈ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಲಾಗುತ್ತದೆ. ಕೇವಲ ಪುಸ್ತಕದ ಜ್ಞಾನವಲ್ಲದೆ, ಪ್ರಾಯೋಗಿಕ ತರಬೇತಿಗೂ ಇಲ್ಲಿ ಆದ್ಯತೆ ನೀಡಲಾಗುತ್ತದೆ.
ವಿವಿಧ ಕೋರ್ಸ್‌ಗಳು: ಇಲ್ಲಿ ಪದವಿ, ಸ್ನಾತಕೋತ್ತರ ಮತ್ತು ಫೆಲೋಶಿಪ್ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಇರಲಿವೆ.
* ವನ್ಯಜೀವಿಗಳ ಶಸ್ತ್ರಚಿಕಿತ್ಸೆ ಮತ್ತು ಔಷಧ
* ಪ್ರಾಣಿಗಳ ಪೋಷಣೆ ಮತ್ತು ನಡವಳಿಕೆಯ ವಿಜ್ಞಾನ
* ತಳಿಶಾಸ್ತ್ರ (Genetics) ಮತ್ತು ಸಂರಕ್ಷಣಾ ನೀತಿಗಳು
* ವನ್ಯಜೀವಿಗಳಿಗಾಗಿ ನೈಸರ್ಗಿಕ ಪರಿಸರ ವಿನ್ಯಾಸ (Animal care environment design)
ವಿದ್ಯಾರ್ಥಿವೇತನ: ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿಶೇಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಸುಧಾರಿತ ಕ್ಲಿನಿಕಲ್ ಮೂಲಸೌಕರ್ಯ ಮತ್ತು ವಸತಿ ಸೌಲಭ್ಯವಿರುವ ಕ್ಯಾಂಪಸ್ ಅನ್ನು ಇದು ಹೊಂದಿರಲಿದೆ.
ಸಮಾರಂಭದಲ್ಲಿ 'ವಂತಾರಾ ಯೂನಿವರ್ಸಿಟಿ ಫೌಂಡಿಂಗ್ ಫೆಲೋಸ್' ಮತ್ತು 'ಎವ್ರಿ ಲೈಫ್ ಮ್ಯಾಟರ್ಸ್' (ಪ್ರತಿ ಜೀವಿಯೂ ಮುಖ್ಯ) ಎಂಬ ವಿದ್ಯಾರ್ಥಿವೇತನವನ್ನು ಘೋಷಿಸಲಾಯಿತು. ಜ್ಞಾನವು ಕೇವಲ ಪ್ರಗತಿಗಾಗಿ ಮಾತ್ರವಲ್ಲದೆ, ಜೀವಸಂಕುಲದ ರಕ್ಷಣೆಗಾಗಿಯೂ ಬಳಕೆಯಾಗಬೇಕು ಎಂಬುದು ಇದರ ಆಶಯವಾಗಿದೆ.ವಿಶೇಷ ಘೋಷಣೆ.

