ಇಂಫಾಲ: ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಣಿಪುರ ಮುಖ್ಯಮಂತ್ರಿ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಅವರಿಗೆ ತಿಳಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಮಿತ್ ಶಾ ಅವರು ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ಖೇಮ್‌ಚಂದ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದೆ.
ಸಭೆಯಲ್ಲಿ, ರಾಜ್ಯದಲ್ಲಿನ ಪ್ರಸ್ತುತ ಕಾನೂನು ಸುವ್ಯವಸ್ಥೆ ಕುರಿತು ಶಾ ಮಾಹಿತಿ ಪಡೆದರು. ಶಾಂತಿ ಸ್ಥಾಪನೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಬಲಪಡಿಸುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಿದರು.
ಅಮಿತ್ ಶಾ ಅವರು, ಮಣಿಪುರಕ್ಕಾಗಿ ಭಾರತೀಯ ಮಹಿಳಾ ಮೀಸಲು ಬೆಟಾಲಿಯನ್ (ಐಆರ್‌ಬಿ) ಸ್ಥಾಪಿಸಲು ತಾತ್ವಿಕವಾಗಿ ಅನುಮೋದನೆ ನೀಡಿದ್ದಾರೆ. ಈ ಔಪಚಾರಿಕ ಪ್ರಸ್ತಾವವನ್ನು ಗೃಹ ಸಚಿವಾಲಯಕ್ಕೆ ಕಳುಹಿಸುವಂತೆ ಖೇಮ್‌ಚಂದ್ ಸಿಂಗ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

