ಚೆನ್ನೈ: 'ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಹಿಂದೆ ಹಿಂದಿ ಭಾಷೆ ಹೇರಿಕೆಯ ಹುನ್ನಾರವಿದೆ' ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್ ಶನಿವಾರ ಆರೋಪಿಸಿದ್ದಾರೆ.
ಸಿಬಿಎಸ್ಇಯ ಪಠ್ಯಕ್ರಮದ ಚೌಕಟ್ಟನ್ನು ರಾಷ್ಟ್ರೀಯ ಶಿಕ್ಷಣ ನೀತಿ- 2020ರೊಂದಿಗೆ ಜೋಡಿಸಿರುವುದು ಶೈಕ್ಷಣಿಕ ಸುಧಾರಣೆಗಾಗಿ ಅಲ್ಲ. ಹಿಂದಿ ಹೇರಿಕೆಗೆ ಎಂದು ದೂರಿದ್ದಾರೆ.
'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಭಾಷೆಗಳನ್ನು ಉತ್ತೇಜಿಸುವ ನೆಪದಲ್ಲಿ ದೇಶದ ಶ್ರೀಮಂತ ಹಾಗೂ ವೈವಿಧ್ಯಮಯ ಭಾಷಾ ಪರಂಪರೆಯನ್ನು ಅಂಚಿನಲ್ಲಿಟ್ಟುಕೊಂಡು, ಹಿಂದಿಗೆ ಸವಲತ್ತು ನೀಡುವ ಕೇಂದ್ರೀಕೃತ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುನ್ನಡೆಸುತ್ತಿದೆ' ಎಂದು ಆರೋಪಿಸಿದ್ದಾರೆ.
'ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವು ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಲಿದೆ. ಆದರೆ, ಪರಸ್ಪರ ಕಲಿಕೆ ಎಲ್ಲಿದೆ? ಹಿಂದಿ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ತಮಿಳು, ತೆಲುಗು, ಕನ್ನಡ, ಮಲಯಾಳ ಅಥವಾ ಬಂಗಾಳಿ, ಮರಾಠಿ ಭಾಷೆಗಳನ್ನು ಕಲಿಯುವಂತೆ ಕಡ್ಡಾಯಗೊಳಿಸಲಾಗುತ್ತದೆಯೇ? ಇಂತಹ ಸ್ಪಷ್ಟತೆ ಇಲ್ಲದ ಈ ನೀತಿಯು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದೆ. ಇದು ಸ್ವೀಕಾರಾರ್ಹವಲ್ಲ' ಎಂದಿದ್ದಾರೆ.
'ನಮ್ಮ ಮಕ್ಕಳು ಭವಿಷ್ಯಕ್ಕೆ ಸಿದ್ಧರಾಗಬೇಕು. ಅವರಿಗೆ ಕೃತಕ ಬುದ್ಧಿಮತ್ತೆ, ಎವಿಜಿಸಿಯಂತಹ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಉದಯೋನ್ಮುಖ ಕ್ಷೇತ್ರಗಳಲ್ಲಿ ಕೌಶಲ ನೀಡಬೇಕಿದೆ. ವೈಜ್ಞಾನಿಕ ಮನೋಭಾವ ಹಾಗೂ ವಿಮರ್ಶಾತ್ಮಕ ಚಿಂತನೆ ಬಲಪಡಿಸುವುದು ನಮ್ಮ ಆದ್ಯತೆ ಆಗಿರಬೇಕು. ಅದರ ಬದಲಾಗಿ ಕಠಿಣ ಭಾಷಾ ಹೊರೆಯು ಅವರ ಪ್ರಗತಿಯನ್ನು ಹಳಿತಪ್ಪಿಸುವ ಬೆದರಿಕೆ ಹಾಕುತ್ತದೆ' ಎಂದು ಹೇಳಿದ್ದಾರೆ.
ಸುಳ್ಳು ಸಂಕಥನ: ಧರ್ಮೇಂದ್ರ ಪ್ರಧಾನ್
ನವದೆಹಲಿ: 'ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ ಎಂಬುದು ಸುಳ್ಳು ಸಂಕಥನ. ತಮ್ಮ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹೀಗೆ ಆರೋಪ ಮಾಡಲಾಗುತ್ತಿದೆ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
'ಪ್ರಗತಿಪರ ಹಾಗೂ ಅಂತರ್ಗತ ಸುಧಾರಣೆಯನ್ನು 'ಭಾಷಾ ಹೇರಿಕೆ' ಎಂದು ತಪ್ಪಾಗಿ ನಿರೂಪಿಸುವುದು ಅನಗತ್ಯ ಆತಂಕ ಮತ್ತು ಗೊಂದಲವನ್ನು ಸೃಷ್ಟಿಸುವ ಗುರಿ ಹೊಂದಿದೆ' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
'ರಾಷ್ಟ್ರೀಯ ಶಿಕ್ಷಣ ನೀತಿ-2020 ವಾಸ್ತವವಾಗಿ ಭಾಷಾ ವಿಮೋಚನೆಯ ಪ್ರಣಾಳಿಕೆ. ಇದು ಮಾತೃಭಾಷೆಗೆ ಆದ್ಯತೆ ನೀಡುತ್ತದೆ. ಪ್ರತಿಯೊಬ್ಬ ತಮಿಳು ಮಗು ಸಹ ತನ್ನ ಅದ್ಭುತ ಭಾಷೆಯಲ್ಲಿಯೇ ಉತ್ತಮ ಸಾಧನೆ ಮಾಡಬಹುದು' ಎಂದು ಸ್ಟಾಲಿನ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
'ಭಾಷಾ ನೀತಿಯನ್ನು ತಪ್ಪಾಗಿ ನಿರೂಪಿಸುವ ಮೂಲಕ ನೀವು ತಮಿಳು ಭಾಷೆಯನ್ನು ರಕ್ಷಿಸುತ್ತಿಲ್ಲ. ನಮ್ಮ ಯುವ ಸಮೂಹಕ್ಕೆ ಬಹುಭಾಷಾ ಜಾಗತಿಕ ನಾಯಕರಾಗುವ ಅವಕಾಶಗಳನ್ನು ನಿರಾಕರಿಸುವ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದೀರಿ' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಕೇಂದ್ರ ಸಚಿವರು ದೂರಿದ್ದಾರೆ.
'ಎನ್ಇಪಿ ಎಲ್ಲ ಭಾಷೆಗಳನ್ನು ಸಮಾನವಾಗಿ ಉತ್ತೇಜಿಸುವ ಮೂಲಕ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುತ್ತದೆ. ಅಸ್ತಿತ್ವದಲ್ಲಿರುವ ದ್ವಿಭಾಷಾ ವ್ಯವಸ್ಥೆಯ ಮಿತಿಗಳನ್ನು ಸಹ ಪರಿಹರಿಸುತ್ತದೆ' ಎಂದಿದ್ದಾರೆ.
'ಉದ್ದೇಶಪೂರ್ವಕ ಪ್ರತಿರೋಧವು ಕೇವಲ ಆಡಳಿತಾತ್ಮಕ ಪ್ರತಿಭಟನೆಯಲ್ಲ. ಇದು ಗುಣಮಟ್ಟದ ಅರ್ಹತೆ ಆಧಾರಿತ ವಸತಿ ಶಿಕ್ಷಣದಿಂದ ಪ್ರಯೋಜನ ಪಡೆಯುವ ಲಕ್ಷ ಲಕ್ಷ ಸಂಖ್ಯೆಯ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾಡುವ ನೇರ ಅಪಚಾರವಾಗಿದೆ' ಎಂದೂ ಪ್ರಧಾನ್ ಅವರು ಸ್ಟಾಲಿನ್ ನಿಲುವನ್ನು ಟೀಕಿಸಿದ್ದಾರೆ.

