ವಾಷಿಂಗ್ಟನ್: ಚಂದ್ರನ ಅನ್ವೇಷಣೆಗೆಂದು ಹೊರಟ ನಾಸಾದ ಆರ್ಟೆಮಿಸ್-2ರ ಗಗನಯಾನಿಗಳನ್ನು ಹೊತ್ತ ನೌಕೆ ಈಗಾಗಲೇ ಯಶಸ್ವಿಯಾಗಿ ಕ್ರಮಿಸಿದೆ. ಗಗನಯಾನಿಗಳು ಚಂದ್ರನ ಸುತ್ತ ಏಳು ಗಂಟೆಗಳ ಹಾರಾಟ ಪ್ರಾರಂಭಿಸಿದ್ದು, ಮನುಷ್ಯರ ಕಣ್ಣಿಗೆ ಎಂದಿಗೂ ಕಾಣದ ಚಂದ್ರನ ಭಾಗಗಳನ್ನು ವೀಕ್ಷಿಸುತ್ತಿದ್ದಾರೆ.
ಜೊತೆಗೆ ಚಂದ್ರನ ಅಪರೂಪದ ಫೋಟೊಗಳನ್ನು ಭೂಮಿಗೆ ಕಳುಹಿಸುತ್ತಿದ್ದಾರೆ.
ನಾಸಾ ವಿಜ್ಞಾನಿಗಳು ನಿಗಡಿಪಡಿಸಿರುವ ಮೇಲ್ವಿಚಾರಣೆಗಾಗಿ ಗಗನಯಾನಿಗಳು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂದ್ರನ ಭಾಗಗಳ ಕುರಿತು ಮಾತನಾಡಿದ ನಾಸಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್, 'ಭೂಮಿಯಿಂದ ಕಾಣುವ ಬಿಳಿ ಮತ್ತು ಬೂದು ಬಣ್ಣದ ಗೆರೆಗಳಿಗೆ ಹೋಲಿಸಿದರೆ, ಚಂದ್ರನು ಕಂದು ಬಣ್ಣವನ್ನು ಹೊಂದಿದ್ದಾನೆ. ನಾನು ಚಂದ್ರನನ್ನು ಹೆಚ್ಚು ಹೆಚ್ಚು ನೋಡುತ್ತೇನೆ. ಅದು ಹೆಚ್ಚು ಕಂದು ಬಣ್ಣದ್ದಾಗಿ ಕಾಣುತ್ತದೆ. ಚಂದ್ರನ ಮೇಲೆ ಸಣ್ಣ ಸಣ್ಣ ರಂಧ್ರಗಳು ಇದ್ದು, ಅವು ದೀಪಗಳಂತೆ ಹೊಳೆಯುತ್ತಿವೆ' ಎಂದು ವಿವರಿಸಿದ್ದಾರೆ.
ಓರಿಯನ್ ನೌಕೆಯು ಚಂದ್ರನ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ಭೂಮಿಯತ್ತ ಮರಳಲು ಸಜ್ಜಾಗಿದೆ. ಈ ನೌಕೆಯು ಏಪ್ರಿಲ್ 10ರಂದು (ಶುಕ್ರವಾರ) ಸ್ಯಾನ್ ಡಿಯಾಗೋ ಕರಾವಳಿಯ ಸಮುದ್ರದಲ್ಲಿ ಗಗನಯಾತ್ರಿಗಳು ಇಳಿಯಲಿದ್ದಾರೆ. 1972ರ ಅಪೋಲೋ 17 ಸಿಬ್ಬಂದಿಯ ನಂತರ ಚಂದ್ರನತ್ತ ಪ್ರಯಾಣಿಸಿರುತ್ತಿರುವ 2ನೇ ಮಾನವರನ್ನು ಒಳಗೊಂಡ ನೌಕೆ ಇದಾಗಿದೆ. ಆರ್ಟೆಮಿಸ್ II ಕಾರ್ಯಾಚರಣೆಯ ಮುಖ್ಯ ಉದ್ದೇಶ ಚಂದ್ರನ ದೂರದ ಮತ್ತೊಂದು ಭಾಗದ ಛಾಯಾಚಿತ್ರ ಸೆರೆಹಿಡಿದು ವಿಶ್ಲೇಷಿಸುವುದಾಗಿದೆ.
ಚಂದ್ರನತ್ತ ಹೊರಟಿರುವ ಓರಿಯನ್ ಬಾಹ್ಯಾಕಾಶ ನೌಕೆಯಲ್ಲಿ ಮೂವರು ಅಮೆರಿಕನ್ನರು ಮತ್ತು ಒಬ್ಬ ಕೆನಡಾದ ಗಗನಯಾನಿ ಇದ್ದಾರೆ. ಕೆನಡಾದ ಜೆರೆಮಿ ಹ್ಯಾನ್ಸೆನ್ ಮತ್ತು ಅಮೆರಿಕದ ವಿಕ್ಟರ್ ಗ್ಲೋವರ್, ರೀಡ್ ವೈಸ್‌ಮನ್ ಮತ್ತು ಕ್ರಿಸ್ಟಿನಾ ಕೋಚ್ ಇದರಲ್ಲಿರುವ ಯಾನಿಗಳು.

