ಮುಂಬೈ: ಇರಾನ್, ಇಸ್ರೇಲ್ ಹಾಗೂ ಅಮೆರಿಕ ಮೈತ್ರಿ ನಡುವಿನ ಉದ್ವಿಗ್ನತೆಯ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದೆ ಎಂಬ ವಿಷಯವನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಉದ್ಧವ್ ಬಣ) ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದೆ.
ಶಿವಸೇನೆ (ಉದ್ಧವ್ ಬಣ) ಮುಖ್ಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, "ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವನ್ನು ಸ್ಥಗಿತಗೊಳಿಸುವಲ್ಲಿ ಪಾಕಿಸ್ತಾನ ಪಾತ್ರವಹಿಸಿರುವುದು ಜಗತ್ತಿಗೆ ಶಾಂತಿಯ ಸಂದೇಶ ನೀಡಿದಂತಾಗಿದೆ. ನಮ್ಮನ್ನು 'ಮಹಾ ವಿಶ್ವಗುರು' ಎಂದು ಹೇಳಿಕೊಳ್ಳುವವರಿಗೆ ಈ ಶ್ರೇಯಸ್ಸು ದೊರೆಯದಿರುವುದು ಯಾಕೆ? ಕಾರಣ, ಈ ಪ್ರಕ್ರಿಯೆಯಲ್ಲಿ ಅವರ ಯಾವುದೇ ಪಾತ್ರವಿಲ್ಲ" ಎಂದು ವ್ಯಂಗ್ಯವಾಡಿದರು.
ಜಗತ್ತಿನಲ್ಲಿ ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿರುವ ಸಂದರ್ಭದಲ್ಲಿ ದೇಶದ ಒಳರಾಜಕೀಯದಲ್ಲಿ ತೊಡಗಿರುವ ನಾಯಕರನ್ನು ಟೀಕಿಸಿದ ಅವರು, "ಜಗತ್ತಿನಲ್ಲಿ ಯುದ್ಧ ನಡೆಯುತ್ತಿದ್ದರೂ, ನಮ್ಮ ಮಹಾ ವಿಶ್ವಗುರು ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ವಿರೋಧಿಗಳ ವಿರುದ್ಧ ಬಾಯಿಯಿಂದ 'ಬಾಂಬ್' ಎಸೆಯುತ್ತಿದ್ದಾರೆ" ಎಂದು ಹೇಳಿದರು.
ಭಾರತ ಜಾಗತಿಕ ಮಟ್ಟದಲ್ಲಿ ಪ್ರಮುಖ ಶಕ್ತಿಯಾಗಿದ್ದರೂ, ಪ್ರಸ್ತುತ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸುವ ಪ್ರಯತ್ನಗಳಲ್ಲಿ ಮನ್ನಣೆ ಪಡೆಯಲು ವಿಫಲವಾಗಿದೆ ಎಂದು ಆರೋಪಿಸಿದ ರಾವತ್, "ಮೋದಿಯ ಆಡಳಿತದಲ್ಲಿ ಇದು ದೇಶಕ್ಕೆ ಹಿನ್ನಡೆಯಾಗಿದೆ. ಯುದ್ಧವನ್ನು ನಿಲ್ಲಿಸಿದ ಶ್ರೇಯಸ್ಸು ಪಾಕಿಸ್ತಾನಕ್ಕೆ ಸಿಕ್ಕಿರುವುದು ಮುಜುಗರದ ಸಂಗತಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, "ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಸಿಗಬೇಕಿದ್ದ ಮಾನ್ಯತೆ ಸದ್ಯ ದೊರೆಯುತ್ತಿಲ್ಲ" ಎಂದು ಟೀಕಿಸಿದರು.
ಇರಾನ್ ನ ಧೈರ್ಯವನ್ನು ಉಲ್ಲೇಖಿಸಿದ ಅವರು, "ಶತ್ರುಗಳ ವಿರುದ್ಧ ಹೇಗೆ ಹೋರಾಡಬೇಕು ಹಾಗೂ ತ್ಯಾಗ ಮಾಡಬೇಕು ಎಂಬುದನ್ನು ಇರಾನ್ ಮತ್ತು ಅದರ ಜನತೆ ತೋರಿಸಿಕೊಟ್ಟಿವೆ. ಇರಾನ್ ಹಾಗೂ ಇಸ್ರೇಲ್ ಎರಡೂ ಭಾರಿ ನಷ್ಟ ಅನುಭವಿಸಿದ್ದರೂ, ಜಾಗತಿಕ ಅಭಿಪ್ರಾಯ ಬದಲಾಗಿದೆ. ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಇರಾನ್ ತಲೆಬಾಗಿಲ್ಲ" ಎಂದು ಹೇಳಿದರು.

