ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಓಗೊಟ್ಟ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗುರುವಾರ ಸರ್ಕಾರಿ ನೌಕರರಿಗೆ ವಾರದಲ್ಲಿ 2 ದಿನ 'ವರ್ಕ್ ಫ್ರಮ್ ಹೋಮ್' ಘೋಷಿಸಿದ್ದಾರೆ.
ಅಧಿಕಾರಿಗಳ ವಾಹನಗಳಿಗೆ ನೀಡಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಸಹಾಯಧನ ಶೇಕಡ 20ರಷ್ಟು ಕಡಿತಗೊಳಿಸಲಾಗುವುದು.
ಎಲ್ಲಾ ಸಚಿವರು ಮತ್ತು ಅಧಿಕಾರಿಗಳು ಪ್ರತಿ ಸೋಮವಾರ ಪ್ರಯಾಣಕ್ಕಾಗಿ ಮೆಟ್ರೊ ಬಳಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಹೊಸ ನಿಯಮದ ಪ್ರಕಾರ, ದೆಹಲಿಯ ಎಲ್ಲಾ ಸರ್ಕಾರಿ ಉದ್ಯೋಗಿಗಳು ವಾರಕ್ಕೆ ಎರಡು ದಿನ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಪ್ರಯಾಣ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ಶೇಕಡ 50ರಷ್ಟು ಅಧಿಕೃತ ಸಭೆಗಳನ್ನು ಇನ್ನು ಮುಂದೆ ಆನ್ಲೈನ್ ಮೂಲಕ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಪ್ರಧಾನಿ ಮೋದಿ ಅವರು ಇಂಧನ ಬಳಕೆ ಕಡಿಮೆ ಮಾಡುವಂತೆ ಕರೆ ನೀಡಿರುವ ಬೆನ್ನಲ್ಲೇ ದೆಹಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

