ಭಾರತದಲ್ಲಿ ಜನನ ದರವು ಚೇತರಿಸಿಕೊಳ್ಳಲಾಗದ ಮಟ್ಟಿಗೆ ಕುಸಿಯುತ್ತಿದ್ದು, ಇದರ ಪರಿಣಾಮವಾಗಿ 2050ರ ವೇಳೆಗೆ ದೇಶದ ಪ್ರತಿ ಐದು ಜನರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿರಲಿದ್ದಾರೆ. ಆದರೆ, ಅವರನ್ನು ನೋಡಿಕೊಳ್ಳಲು ಯುವ ಪೀಳಿಗೆಯ ಸಂಖ್ಯೆ ಗಣನೀಯವಾಗಿ ಕಡಿಮೆ ಇರಲಿದೆ.
ಜನಸಂಖ್ಯೆಯು ಸ್ಥಿರವಾಗಿರಲು ಒಟ್ಟು ಜನನ ದರ (ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೆರುವ ಮಕ್ಕಳ ಸರಾಸರಿ ಸಂಖ್ಯೆ) 2.1 ಇರಬೇಕು. ಆದರೆ, ಜನನ ದರದ ರಾಷ್ಟ್ರೀಯ ಸರಾಸರಿ 1.9 ಇದೆ. ಆಂಧ್ರಪ್ರದೇಶದಲ್ಲಂತೂ ಈ ದರ 1.5ಕ್ಕೆ ಕುಸಿದಿದೆ. ಇದೇ ಪ್ರಮಾಣದ ಜನನ ದರ ಮುಂದುವರಿದರೆ, ಮುಂದಿನ 20 ವರ್ಷಗಳಲ್ಲಿ ಆಂಧ್ರಪ್ರದೇಶದ ಶೇಕಡ 23ರಷ್ಟು ಜನಸಂಖ್ಯೆ ವೃದ್ಧರದ್ದೇ ಆಗಿರುತ್ತದೆ. ದುಡಿಯುವ ಕೈಗಳ (ಯುವಕರ) ಸಂಖ್ಯೆ ಕಡಿಮೆಯಾಗಿ, ವಯಸ್ಸಾದವರನ್ನು ಸಾಕುವ ಭರದಲ್ಲಿ ರಾಜ್ಯದ ಆರ್ಥಿಕತೆ ಕುಂಟಬಹುದು. ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಭಾರತದಲ್ಲಿ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದ್ದರೆ, ಉತ್ತರ ಮತ್ತು ಪೂರ್ವದ ಕೆಲವು ರಾಜ್ಯಗಳಲ್ಲಿ ಇಂದಿಗೂ ಸರಾಸರಿಗಿಂತ ಹೆಚ್ಚಿದೆ. ಕರ್ನಾಟಕ/ಆಂಧ್ರಪ್ರದೇಶ/ಕೇರಳ ರಾಜ್ಯಗಳ ಜನನ ದರ ಸರಾಸರಿ 1.5 ಇದ್ದರೆ, ತಮಿಳುನಾಡು/ಪಶ್ಚಿಮ ಬಂಗಾಳ/ದೆಹಲಿ 1.2ರಿಂದ 1.3ರ ಜನನ ದರ ಹೊಂದಿವೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ.
ಜಾಗತಿಕ ಮಟ್ಟದಲ್ಲೂ ಜನನ ದರವು ಕಳೆದ 70 ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. 1950ರಲ್ಲಿ ವಿಶ್ವದ ಸರಾಸರಿ ಜನನ ದರ ಪ್ರತಿ ಮಹಿಳೆಗೆ 5ರಷ್ಟಿದ್ದು, ಅದು 2021ರ ವೇಳೆಗೆ 2.2ಕ್ಕೆ ಇಳಿಕೆಯಾಗಿದೆ.
ಭಾರತವು ಪ್ರಸ್ತುತ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. 2024ರ ಏಪ್ರಿಲ್ನಲ್ಲಿ ಭಾರತವು 141.26 ಕೋಟಿ ಜನಸಂಖ್ಯೆ ಹೊಂದಿದ್ದ ಚೀನಾವನ್ನು ಹಿಂದಿಕ್ಕಿ ಈ ಸ್ಥಾನಕ್ಕೆ ಏರಿತ್ತು. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿಯ ಪ್ರಕಾರ, 2025ರ ಏಪ್ರಿಲ್ ವೇಳೆಗೆ ಭಾರತದ ಜನಸಂಖ್ಯೆ 146.39 ಕೋಟಿಗೆ ತಲುಪಿತ್ತು. ಅಲ್ಲದೆ, ರಿಯಲ್ ಟೈಮ್ ಡೇಟಾ ವೆಬ್ಸೈಟ್ ಆದ ವಲ್ಡೋಮೀಟರ್ ನೀಡುವ ಇತ್ತೀಚಿನ ಮಾಹಿತಿ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಈ ಅಂಕಿ-ಅಂಶವು 147 ಕೋಟಿಯನ್ನೂ ದಾಟಿದೆ. ಈ ಬೃಹತ್ ಜನಸಂಖ್ಯೆಯಲ್ಲಿ ಶೇ.68ರಷ್ಟು ಜನಸಂಖ್ಯೆಯು ಯುವಕರದ್ದೇ ಆಗಿದೆ (35 ವರ್ಷದೊಳಗಿನವರು) ಎಂಬುದು ಗಮನಾರ್ಹ ಅಂಶ. ಭಾರತವು ಉತ್ತಮ ಶಿಕ್ಷಣ ಮತ್ತು ಹೆರಿಗೆಯ ಆರೋಗ್ಯ ರಕ್ಷಣೆ ಸೌಲಭ್ಯ ಹೊಂದಿದ್ದು, ದೇಶದಲ್ಲಿ ಜನನ ದರವನ್ನು ಯಶಸ್ವಿಯಾಗಿ ಕಡಿಮೆ ಮಾಡಿದೆ. 1970ರ ದಶಕದಲ್ಲಿ ಪ್ರತಿ ಮಹಿಳೆಗೆ ಸರಾಸರಿ ಐದು ಮಕ್ಕಳಿದ್ದ ಪ್ರಮಾಣವು, ಇಂದು ಸರಿಸುಮಾರು ಎರಡು ಮಕ್ಕಳಿಗೆ ಬಂದು ನಿಂತಿದೆ. ಆದರೆ, ಇದೇ ಸ್ಥಿತಿ ದೀರ್ಘಾವಧಿಗೆ ಮುಂದುವರಿದರೆ ಭಾರತ ವೃದ್ಧರ ದೇಶವಾಗಲಿದೆ. ದೇಶದಲ್ಲಿ ಜನನ ದರಗಳು ಕುಸಿಯುತ್ತಿದ್ದರೂ, ಸದ್ಯಕ್ಕೆ ಯುವ ವಯಸ್ಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ, ಭಾರತದ ಒಟ್ಟು ಜನಸಂಖ್ಯೆಯು ಸದ್ಯಕ್ಕೆ ಏರಿಕೆ ಕಾಣಲಿದೆ. ಆದರೆ, 2060ರ ದಶಕದಲ್ಲಿ ಜನಸಂಖ್ಯೆ 170 ಕೋಟಿಯ ಗರಿಷ್ಠ ಮಟ್ಟವನ್ನು ತಲುಪಿ, ನಂತರ ಸ್ಥಿರಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಜನಸಂಖ್ಯಾ ಪಲ್ಲಟವು ಮುಂಬರುವ ದಶಕಗಳಲ್ಲಿ ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಮಾರುಕಟ್ಟೆ ಮತ್ತು ಹಿರಿಯ ನಾಗರಿಕರ ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತವು ಮೊದಲಿನಿಂದಲೂ ಸಣ್ಣ ಕುಟುಂಬಗಳನ್ನು ಉತ್ತೇಜಿಸಲು ಪ್ರೋತ್ಸಾಹಕಗಳನ್ನು ನೀಡುತ್ತ ಬಂದಿತ್ತಾದರೂ, ಪ್ರಸ್ತುತ ಜನನ ದರದ ತೀವ್ರ ಕುಸಿತಕ್ಕೆ ಪ್ರತಿಕ್ರಿಯೆಯಾಗಿ ಪ್ರಾದೇಶಿಕ ಮಟ್ಟದಲ್ಲಿ ವಿಭಿನ್ನ ನೀತಿಗಳು ಹೊರಹೊಮ್ಮುತ್ತಿವೆ. ಇದಕ್ಕೆ ಉದಾಹರಣೆಯಾಗಿ ಆಂಧ್ರಪ್ರದೇಶ ಸರ್ಕಾರವು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೆರುವವರಿಗೆ ನಗದು ಪ್ರೋತ್ಸಾಹಕಗಳನ್ನು ಘೋಷಿಸಿದೆ. ಆಂಧ್ರಪ್ರದೇಶ ಸರ್ಕಾರ ಜಾರಿಗೆ ತಂದಿರುವ ಇತ್ತೀಚಿನ ಜನಸಂಖ್ಯಾ ಪ್ರೋತ್ಸಾಹಕ ಯೋಜನೆಯನ್ನು ದಕ್ಷಿಣದ ಇತರ ರಾಜ್ಯಗಳೂ ಅಳವಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಕ್ಷೇತ್ರ ಮರು ವಿಂಗಡಣೆ ಭೀತಿ
ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದ್ದು, ಅದನ್ನು ಜನಸಂಖ್ಯೆಯ ಆಧಾರದ ಮೇಲೆ ಮಾಡುವ ಪ್ರಸ್ತಾಪವಿದೆ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ (ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ) ಇದರಿಂದ ಸಂಸತ್ತಿನಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾಗಿ, ರಾಜಕೀಯ ಪ್ರಾಬಲ್ಯ ನಷ್ಟವಾಗುವ ಭೀತಿ ಇದೆ. ಹಾಗಾಗಿ, ರಾಜಕೀಯ ಕಾರಣದಿಂದಲೂ ಜನಸಂಖ್ಯೆ ಹೆಚ್ಚಿಸಲು ದಕ್ಷಿಣದ ರಾಜ್ಯಗಳು ಚಿಂತನೆ ನಡೆಸಿವೆ.
ಇಳಿಕೆಯ ಹಾದಿ
ಭಾರತದಲ್ಲಿ 1950ರಲ್ಲಿ ಒಟ್ಟು ಜನನ ದರವು 6.18ರಷ್ಟಿತ್ತು. ಇದು 1980ರ ವೇಳೆಗೆ 4.60ಕ್ಕೆ ಇಳಿದು, 2021ರ ಹೊತ್ತಿಗೆ 1.90ರ ಕನಿಷ್ಠ ಮಟ್ಟಕ್ಕೆ ತಲುಪಿದೆ. ವಲಸೆಯಿಲ್ಲದೆ ಒಂದು ಪೀಳಿಗೆಯ ಜನಸಂಖ್ಯೆಯು ಮುಂದಿನ ಪೀಳಿಗೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯಲು ಕನಿಷ್ಠ 2.1ರಷ್ಟು ಜನನ ದರ (ಟಿಎಫ್ಆರ್) ಅಗತ್ಯವಿರುತ್ತದೆ; ಆದರೆ ಭಾರತವು ಈಗ ಈ ಮಟ್ಟಕ್ಕಿಂತ ಕೆಳಗೆ ಜಾರಿದೆ.
ಕೇರಳ ಮತ್ತು ದೆಹಲಿಯಂತಹ ಪುಟ್ಟ ರಾಜ್ಯಗಳ ಜನನ ದರವು 1.2ರಿಂದ 1.5ರ ವ್ಯಾಪ್ತಿಯಲ್ಲಿ ಇದೆ. ಕೆಲವು ಪ್ರದೇಶಗಳು ಈಗಾಗಲೇ ವೇಗವಾಗಿ ವಯಸ್ಸಾಗುತ್ತಿರುವ ಜನಸಂಖ್ಯೆಯ ಸವಾಲನ್ನು ಎದುರಿಸುತ್ತಿವೆ.
ಪ್ರಮುಖ ಕಾರಣಗಳು
- ಮಹಿಳೆಯರಲ್ಲಿ ಹೆಚ್ಚುತ್ತಿರುವ ಶಿಕ್ಷಣ, ಸಾಕ್ಷರತೆ ಮತ್ತು ಉದ್ಯೋಗ.
- ವಿವಾಹದ ಸರಾಸರಿ ವಯಸ್ಸು ಮುಂದೂಡಲ್ಪಡುತ್ತಿರುವುದು ಮತ್ತು ಸಣ್ಣ ಕುಟುಂಬಗಳತ್ತ ಸಮಾಜದ ಒಲವು.
- ದಿನೇದಿನೆ ಹೆಚ್ಚುತ್ತಿರುವ ಜೀವನವೆಚ್ಚ ಹಾಗೂ ಹಣದುಬ್ಬರ.
ಜಾಗತಿಕ ಸಂಶೋಧನೆಗಳ ಪ್ರಕಾರ, ಇಂದಿನ ಡಿಜಿಟಲ್ ಸಾಧನಗಳು ಮತ್ತು ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆ ಜನರ ಜೀವನಶೈಲಿ ಮತ್ತು ಸಾಮಾಜಿಕ ಒಡನಾಟಗಳ ಮೇಲೆ ಬೀರುತ್ತಿರುವ ಪ್ರಭಾವವೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇತರ ರಾಜ್ಯಗಳ ಸ್ಥಿತಿ
ಭಾರತದ ಜನಸಂಖ್ಯಾ ಚಿತ್ರಣ ಪ್ರಸ್ತುತ ಸಂಪೂರ್ಣವಾಗಿ ಎರಡು भागವಾಗಿ ವಿಭಜನೆಗೊಂಡಿದೆ. ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದ್ದರೆ, ಉತ್ತರ ಮತ್ತು ಪೂರ್ವದ ಕೆಲವು ರಾಜ್ಯಗಳಲ್ಲಿ ಇಂದಿಗೂ ಸರಾಸರಿಗಿಂತ ಹೆಚ್ಚಿದೆ. ಇತ್ತೀಚಿನ ಆರ್ಥಿಕ ಸಮೀಕ್ಷೆ ಮತ್ತು ಕೇಂದ್ರದ ದತ್ತಾಂಶಗಳ ಪ್ರಕಾರ ರಾಜ್ಯಗಳ ಟಿ.ಎಫ್.ಆರ್ ಸ್ಥಿತಿ ಹೀಗಿದೆ.
ರಾಜ್ಯ ಪ್ರಸ್ತುತ ಜನನ ದರ ಸ್ಥಿತಿ ಬಿಹಾರ: 2.8ರಿಂದ 3.0 - ದೇಶದಲ್ಲೇ ವೇಗವಾಗಿ ಜನಸಂಖ್ಯೆ ಹೆಚ್ಚುತ್ತಿರುವ ರಾಜ್ಯಉತ್ತರ ಪ್ರದೇಶ: 2.4ರಿಂದ 2.6 - ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಮಧ್ಯಪ್ರದೇಶರಾಜಸ್ಥಾನ: 2.0ರಿಂದ 2.4 -ಸ್ಥಿರತೆಯ ಹಾದಿಯಲ್ಲಿವೆ ಕರ್ನಾಟಕ/ಆಂಧ್ರಪ್ರದೇಶ/ಕೇರಳ: 1.5 -ಜನಸಂಖ್ಯೆಯಲ್ಲಿ ತೀರಾ ಕಳವಳಕಾರಿ ಕುಸಿತ ತಮಿಳುನಾಡು / ಪಶ್ಚಿಮ ಬಂಗಾಳ / ದೆಹಲಿ: 1.2ರಿಂದ 1.3 -ಅತ್ಯಂತ ಕನಿಷ್ಠ ಮಟ್ಟ
ದಕ್ಷಿಣ ಭಾರತಕ್ಕೆ ಎಚ್ಚರಿಕೆಯ ಗಂಟೆ
-ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ದುಡಿಯುವ ಯುವ ವರ್ಗಕ್ಕಿಂತ ವಯಸ್ಸಾದ ವೃದ್ಧರ ಸಂಖ್ಯೆ ಹೆಚ್ಚಾಗಲಿದೆ. ವಯಸ್ಸಾದ ಜನಸಂಖ್ಯೆ ಹೆಚ್ಚಾದಂತೆ ಸರ್ಕಾರದ ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ಭದ್ರತೆ (ಪಿಂಚಣಿ ಇತ್ಯಾದಿ) ಮೇಲಿನ ವೆಚ್ಚ ದುಪ್ಪಟ್ಟಾಗಲಿದೆ.
- ಕೌಶಲಯುಕ್ತ ಯುವ ಕಾರ್ಮಿಕರ ಕೊರತೆಯಿಂದಾಗಿ ಉತ್ಪಾದನಾ ವಲಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆರ್ಥಿಕ ಬೆಳವಣಿಗೆಯ ವೇಗ ನಿಧಾನವಾಗಬಹುದು.
- ಸ್ಥಳೀಯವಾಗಿ ದುಡಿಯುವ ಕೈಗಳ ಕೊರತೆ ಎದುರಾಗುವುದರಿಂದ, ದಕ್ಷಿಣದ ರಾಜ್ಯಗಳು ಉತ್ತರ ಮತ್ತು ಪೂರ್ವ ಭಾರತದ (ಬಿಹಾರ, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ) ವಲಸೆ ಕಾರ್ಮಿಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಬೇಕಾಗುತ್ತದೆ. ಈಗಾಗಲೇ ಕಟ್ಟಡ ನಿರ್ಮಾಣ, ಆತಿಥ್ಯ ಮತ್ತು ಕೃಷಿ ವಲಯದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸ್ಥಳೀಯವಾಗಿ ಜನಸಂಖ್ಯಾ ಸ್ವರೂಪ, ಭಾಷೆ ಮತ್ತು ಸಾಂಸ್ಕೃತಿಕ ಸಮತೋಲನದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
- ಪ್ರಾಥಮಿಕ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಯುವ ಗ್ರಾಹಕರನ್ನೇ ನಂಬಿಕೊಂಡಿರುವ ಮಾರುಕಟ್ಟೆಗಳು ಮತ್ತು ವ್ಯಾಪಾರೋದ್ಯಮಗಳ ಮೇಲೂ ಇದು ದೀರ್ಘಕಾಲೀನ ನಕಾರಾತ್ಮಕ ಪರಿಣಾಮ ಬೀರಲಿದೆ.

