ನವದೆಹಲಿ: ಅಕ್ರಮ ವಲಸೆ ಮತ್ತು ಇತರೆ ಅಸ್ವಾಭಾವಿಕ ಕಾರಣಗಳಿಂದ ದೇಶದ ಜನಸಂಖ್ಯೆಯ ಸ್ವರೂಪದಲ್ಲಾಗಿರುವ ಬದಲಾವಣೆಗಳ ಕುರಿತು 'ವೈಜ್ಞಾನಿಕ ಅಧ್ಯಯನ' ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವೊಲೆಕರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 2025ರ ಸ್ವಾತಂತ್ರ ದಿನಾಚರಣೆ ವೇಳೆ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಈ ಸಮಿತಿ ರಚಿಸುವ ಬಗ್ಗೆ ಘೋಷಣೆ ಮಾಡಿದ್ದರು. ನಂತರ ಸೆಪ್ಟೆಂಬರ್‌ನಲ್ಲಿ ಸಚಿವ ಸಂಪುಟವು ಇದಕ್ಕೆ ಒಪ್ಪಿಗೆ ನೀಡಿತ್ತು.
ಸಮಿತಿಯಲ್ಲಿ ಯಾರಿದ್ದಾರೆ?
* ನ್ಯಾ. ಪ್ರಕಾಶ್ ಪ್ರಭಾಕರ್ ನವೊಲೆಕರ್ ನಿವೃತ್ತ ನ್ಯಾಯಮೂರ್ತಿ (ಸಮಿತಿ ನೇತೃತ್ವ)
* ಗಣತಿ ಕಮಿಷನರ್ (ಸದಸ್ಯ)
* ದುರ್ಗಾ ಶಂಕರ್ ಮಿಶ್ರಾ ನಿವೃತ್ತ ಐಎಎಸ್ ಅಧಿಕಾರಿ (ತಜ್ಞ ಸದಸ್ಯ)
* ಬಾಲಾಜಿ ಶ್ರೀವಾಸ್ತವ್ ನಿವೃತ್ತ ಐಪಿಎಸ್ ಅಧಿಕಾರಿ (ತಜ್ಞ ಸದಸ್ಯ)
* ಡಾ. ಶಮಿಕಾ ರವಿ ಅರ್ಥಶಾಸ್ತ್ರಜ್ಞೆ (ತಜ್ಞ ಸದಸ್ಯ). ಇವರು ಪ್ರಧಾನಿ ಅವರ ಆರ್ಥಿಕ ಸಲಹೆಗಾರರ ಸಮಿತಿಯ ಸದಸ್ಯೆ)
ಅಧಿಸೂಚನೆಯಲ್ಲೇನಿದೆ?
* ದೇಶದ ಕೆಲವು ಭಾಗಗಳಲ್ಲಿ ಪ್ರಮುಖವಾಗಿ ಗಡಿ ಜಿಲ್ಲೆಗಳಲ್ಲಿ ಜನಸಂಖ್ಯೆಯ ಸ್ವರೂಪದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಬದಲಾವಣೆಗಳು ಸ್ವಾಭಾವಿಕವಾಗಿಲ್ಲ. ಅಕ್ರಮ ವಲಸೆ ನೆರೆಯ ದೇಶದ ಜನರು ನಮ್ಮ ಗಡಿ ಒಳಗೆ ಆಗಿಂದಾಗ್ಗೆ ಬಂದು ಹೋಗುತ್ತಿರುವುದು ಮತ್ತು ಇವುಗಳನ್ನು ತಡೆಗಟ್ಟದ ಆಡಳಿತಾತ್ಮಕ ವೈಫ್ಯದ ಕಾರಣ ಜನಸಂಖ್ಯೆ ಸ್ವರೂಪದಲ್ಲಿ ಬದಲಾವಣೆಗಾಗಿವೆ
* ಈ ಅತಿದೊಡ್ಡ ಸವಾಲು ಕೇವಲ ಗಡಿ ಜಿಲ್ಲೆಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಇದು ಇತರೆ ಪ್ರದೇಶವನ್ನೂ ವ್ಯಾಪಿಸಿದೆ. ನಗರಗಳು ಕಾರ್ಖಾನೆಗಳು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳು ಮತ್ತು ಇತರೆ ಸಾಮಾಜಿಕ ಆರ್ಥಿಕವಾಗಿ ಸೂಕ್ಷ್ಮ ಎನಿಸಿರುವ ಪ್ರದೇಶಗಳಿಗೂ ವ್ಯಾಪಿಸಿದೆ. ಇದರಿಂದ ಸರ್ಕಾರವು ಸೇವೆ ಒದಗಿಸಲು ಸಂಪನ್ಮೂಲ ಹಂಚಿಕೆ ಸ್ಥಳೀಯ ಆಡಳಿತ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಸಮಸ್ಯೆಯಾಗುತ್ತಿದೆ.
* ಈ ಸಮಸ್ಯೆಯನ್ನು ಪರಿಹರಿಸಲು ಈಗಿರುವ ಸಾಂಸ್ಥಿಕ ಚೌಕಟ್ಟು ಪೂರಕವಾಗಿಲ್ಲ. ರಾಜ್ಯ-ಕೇಂದ್ರ ಸರ್ಕಾರಗಳ ಮಧ್ಯೆ ಸಹಕಾರ ಸಾಕ್ಷ್ಯ ಆಧಾರಿತ ಮತ್ತು ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮತ್ತು ಇದಕ್ಕೆ ಪರಿಹಾರ ಸೂಚಿಸುವ ವ್ಯವಸ್ಥೆ ಇಲ್ಲವಾಗಿದೆ.
ಯಾವುದರ ಕುರಿತು ಅಧ್ಯಯನ?
* ಅಕ್ರಮ ವಲಸೆಯೂ ಸೇರಿ ಜನಸಂಖ್ಯೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಯಿಂದಾಗಿ ಉದ್ಭವಿಸಿರುವ ಸವಾಲುಗಳ ಬಗ್ಗೆ. ಬದಲಾವಣೆಯಾದ ಕಾರಣಗಳ ಬಗ್ಗೆ ಮತ್ತು ಅಕ್ರಮ ವಲಸೆ ಅಸ್ವಾಭಾವಿಕವಾಗಿ ನಮ್ಮ ದೇಶದಲ್ಲಿ ಬಂದು ನೆಲಸಿರುವ ಮಾದರಿಗಳ ಬಗ್ಗೆ ಮತ್ತು ಯೋಚಿತವಾಗಿ ನಡೆಸುವ ಅಕ್ರಮ ವಲಸೆ ಕುರಿತು.
* ದೇಶದ ಫಲವಂತಿಕೆ ದರದಲ್ಲಿ ಆದ ಬದಲಾವಣೆಗಳು ನೆರೆ ದೇಶದ ಜನರು ನಮ್ಮ ದೇಶದೊಳಗೆ ಬಂದು-ಹೋಗುವುದು ಆರ್ಥಿಕ ಅವಕಾಶಗಳು ಮತ್ತು ಇತರೆ ಸಾಮಾಜಿಕ-ಪರಿಸರ ಕಾರಣಗಳು.
* ಧಾರ್ಮಿಕ ಮತ್ತು ಜಾತಿ-ಸಮುದಾಯಗಳಿಗೆ ಸಂಬಂಧಿಸಿ ಜನಸಂಖ್ಯೆ ಸ್ವರೂಪದಲ್ಲಾದ ಬದಲಾವಣೆ ಕುರಿತು. ಈ ಬದಲಾವಣೆಯು ಅಸ್ವಾಭಾವಿಕ ಎನಿಸುವ ಅಕ್ರಮ ವಲಸೆಯಿಂದಾದ ಬದಲಾವಣೆಗಳ ಕುರಿತು ಗಮನಹರಿಸಿ ವಿಶ್ಲೇಷಿಸಬೇಕು.
ಸಮಿತಿ ವರದಿಯಲ್ಲೇನಿರಬೇಕು?
* ಕಾನೂನಾತ್ಮಕವಾದ ನ್ಯಾಯಸಮ್ಮತವಾದ ಮತ್ತು ಕಾಲಮಿತಿ ಇರುವ ಶಾಶ್ವತ ಕಾರ್ಯಯೋಜನೆಯೊಂದನ್ನು ರೂಪಿಸಿ. ಅಕ್ರಮ ವಲಸಿಗರನ್ನು ಗುರುತಿಸುವುದು ವಶಕ್ಕೆ ಪಡೆಯುವುದು ಮತ್ತು ಅವರದೇ ದೇಶಕ್ಕೆ ವಾಪಸು ಕಳುಹಿಸುವ ಯೋಜನೆ ಇದಾಗಿರಬೇಕಿದೆ.
* ದೇಶದ ಗಡಿ ನಿರ್ವಹಣೆಯನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಾಂಸ್ಥಿಕ ವ್ಯವಸ್ಥೆಯ ಕುರಿತು ಶಿಫಾರಸು ನೀಡಿ.
* ಅಕ್ರಮ ವಲಸೆಯಿಂದಾಗಿ ಜನಸಂಖ್ಯೆ ಸ್ವರೂಪದಲ್ಲಿ ಆಗುವ ಬದಲಾವಣೆಯ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಮಧ್ಯೆ ಸಹಕಾರವನ್ನು ಹೆಚ್ಚಿಸಲು ನೀತಿಯೊಂದನ್ನು ಶಿಫಾರಸು ಮಾಡಿ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ ('ಎಕ್ಸ್' ಪೋಸ್ಟ್)'ದೇಶದ ಭದ್ರತೆಗೆ ಸವಾಲು' ಒಳನುಸುಳುವಿಕೆ ಮತ್ತು ಇತರೆ ಅಸ್ವಾಭಾವಿಕ ಕಾರಣಗಳಿಂದ ಜನಸಂಖ್ಯೆಯ ಸ್ವರೂಪದಲ್ಲಿ ಬದಲಾವಣೆಗಳಾಗಿವೆ. ಇದು ಇಂದಿನ ಮತ್ತು ಮುಂದಿನ ದೇಶದ ಭವಿಷ್ಯಕ್ಕೆ ಪ್ರಮುಖ ಸವಾಲಾಗಲಿದೆ. ಜೊತೆಗೆ ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಯೊಂದಿಗೆ ಇದು ಸಂಬಂಧ ಹೊಂದಿದೆ.

