ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ -2026ಕ್ಕೆ ಸಂಬಂಧಿಸಿ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಬುಧವಾರ ಮನವಿ ಮಾಡಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠದ ಮುಂದೆ ಮನವಿ ಸಲ್ಲಿಸಿದ್ದಾರೆ.
'ಅರ್ಜಿಗಳನ್ನು ಶುಕ್ರವಾರ ಪಟ್ಟಿ ಮಾಡಿ, ನೋಟಿಸ್ ಜಾರಿಗೊಳಿಸಿದರೆ ನಾವು ಹೈಕೋರ್ಟ್‌ಗಳಿಗೆ ವಿಚಾರಣೆಯನ್ನು ಮುಂದೂಡುವಂತೆ ಮನವಿ ಸಲ್ಲಿಸುತ್ತೇವೆ' ಎಂದು ತುಷಾರ್ ಮೆಹ್ತಾ ಹೇಳಿದರು.
'ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಹೈಕೋರ್ಟ್‌ಗಳು ವಿಭಿನ್ನ ದೃಷ್ಟಿಕೋನ ಹೊಂದಿರುತ್ತವೆ' ಎಂದು ಅವರು ಪೀಠದ ಗಮನಕ್ಕೆ ತಂದರು.
'ಕೆಲವೊಮ್ಮೆ ನಾವು ಹೈಕೋರ್ಟ್ ದೃಷ್ಟಿಕೋನದ ಲಾಭವನ್ನೂ ಪಡೆಯಬಹುದು' ಎಂದು ಸಿಜೆಐ ಅಭಿಪ್ರಾಯಪಟ್ಟರು.
ಮಸೂದೆಯಲ್ಲಿ ಸ್ವಯಂ ಗುರುತಿಸಿಕೊಳ್ಳುವಿಕೆಯನ್ನು ರದ್ದುಗೊಳಿಸಿರುವುದು ಟೀಕೆಗೆ ಕಾರಣವಾಗಿದೆ. 'ವ್ಯಕ್ತಿಯ ಘನತೆ, ಖಾಸಗೀತನ, ದೇಹದ ಮೇಲಿನ ಹಕ್ಕಿನ ಉಲ್ಲಂಘನೆ ಆಗಿದೆ' ಎಂದು ಅರ್ಜಿದಾರರು ದೂರಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

