ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶನಿವಾರ ಸಂಭವಿಸಿದ ಮೇಘಸ್ಫೋಟದಿಂದಾಗಿ ಹಳ್ಳವೊಂದರಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಹಲವಾರು ಹೋಟೆಲ್‌ಗಳು ಮತ್ತು ಮನೆಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಘಸ್ಫೋಟದಿಂದ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ 'ಅವೂರಾ' ಮತ್ತು 'ದೆಹಾವತು' ಅರಣ್ಯ ಪ್ರದೇಶಗಳಲ್ಲಿ ದಿಢೀರನೆ ಭಾರಿ ಮಳೆಯಾಗಿದೆ.
ಇದರಿಂದಾಗಿ ಅವೂರಾ ಭಾಗದ ಹಳ್ಳದಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಉಕ್ಕಿ ಹರಿದ ನೀರು ಕನಿಷ್ಠ ಅರ್ಧ ಡಜನ್ ಹೋಟೆಲ್‌ಗಳಿಗೆ ನುಗ್ಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಅಲ್ಲಿದ್ದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಜೊತೆಗೆ ಈ ಪ್ರದೇಶದ ಹಲವಾರು ಮನೆಗಳು ಸಹ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

