ಮುಂಬೈ: ಮರಾಠಾ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮರಾಠ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮನೋಜ್ ಜಾರಂಗೆ ಮೇ 30ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.
ತೀವ್ರ ಬಿಸಿಲಿನಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ನನ್ನ ಆರೋಗ್ಯಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಮಹಾರಾಷ್ಟ್ರ ಸರ್ಕಾರವೇ ನೇರ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ.
ಮರಾಠಾ ಸಮುದಾಯದ ವಿವಿಧ ಬೇಡಿಕೆಗಳಿಗಾಗಿ ಪಟ್ಟು ಹಿಡಿದಿರುವ ಅವರು, ಈ ಬಾರಿ ಯಾವುದೇ ನೆರಳಿನ ಆಶ್ರಯದಲ್ಲಿ ಕೂರುವುದಿಲ್ಲ ಅಥವಾ ನೀರು ಕುಡಿಯಲು ನಿರಾಕರಿಸಿದ್ದಾರೆ.
ಪ್ರತಿಭಟನೆ ಸಮಯದಲ್ಲಿ ನೀರು, ಆಹಾರ ತ್ಯಜಿಸುತ್ತೇನೆ. ಒಂದೋ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ನಾನು ಪ್ರಾಣ ಬಿಡುತ್ತೇನೆ ಎಂದು ಜಾರಂಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸರ್ಕಾರಕ್ಕೆ ಮೇ 29 ಗಡುವು...
ಬೇಡಿಕೆಗಳ ಈಡೇರಿಕೆಗಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಮೇ 29ಕ್ಕೆ ಅಂತಿಮ ಗಡುವು ನೀಡಿದ್ದಾರೆ. ಚರ್ಚೆ ನಡೆಸಲು ನಾನು ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಸಮಯ ನೀಡಿದ್ದೇನೆ. ಈಗ ಕಠಿಣ ನಿಲುವು ತಳೆಯುವ ಕಾಲ ಬಂದಿದೆ. ಬಿಸಿಲ ಬೇಗೆಯಿಂದ ಒಂದು ವೇಳೆ ನಾನು ಮೃತಪಟ್ಟರೆ, ಅದಕ್ಕೆ ಮುಖ್ಯಮಂತ್ರಿ ಮತ್ತು ಈ ಸರ್ಕಾರವೇ ಜವಾಬ್ದಾರರಾಗುತ್ತಾರೆ ಎಂದು ಜಾರಂಗೆ ಹೇಳಿದ್ದಾರೆ.

