ಒಂದೆಡೆ, ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ - ಇರಾನ್ ಮಾತುಕತೆ ನಡೆಯುತ್ತಿದೆ. ಆದರೆ, ಮತ್ತೊಂದು ಕಡೆ, ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ ನಾಪತ್ತೆಯಾಗಿರುವುದು ಭಾರಿ ಚರ್ಚೆ ಹುಟ್ಟುಹಾಕಿದೆ.
ಮೊಜ್ತಬಾ ಅವರು ಎರಡು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವಿಡಿಯೊ ಅಥವಾ ಆಡಿಯೊ ಸಂದೇಶವನ್ನೂ ಹಂಚಿಕೊಂಡಿಲ್ಲ. ಇದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಅಮೆರಿಕ, ಇಸ್ರೇಲ್ ಪಡೆಗಳು ಫೆಬ್ರುವರಿ 28ರಂದು ನಡೆಸಿದ ವಾಯು ದಾಳಿ ವೇಳೆ ಮೊಜ್ತಬಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಅದೇ ಕಾರಣದಿಂದಾಗಿ ಅವರು, ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಅಮೆರಿಕ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಆತಂಕ ಹೆಚ್ಚಿಸಿದ ಖಮೇನಿ ಗೈರು
ಅಮೆರಿಕ ಜೊತೆಗಿನ ಮಾತುಕತೆ ಸಂದರ್ಭದಲ್ಲಿಯೂ ಮೊಜ್ತಬಾ ಅವರು ಕಾಣಿಸಿಕೊಳ್ಳದಿರುವುದು ಸರ್ಕಾರದ ಅಸ್ತಿತ್ವದ ಕುರಿತಾಗಿಯೇ ಹಲವು ಪ್ರಶ್ನೆಗಳು ಹುಟ್ಟುಹಾಕಿದೆ.
'ಇರಾನ್‌ನ ಬೀದಿಗಳಲ್ಲಿ ಮೊಜ್ತಬಾ ಅವರ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿರುವ ಅವರ ಖಾತೆಯ ಮೂಲಕವೂ ನಿರಂತರವಾಗಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಅದರಲ್ಲಿರುವ ಪ್ರೊಫೈಲ್ ಫೋಟೊ ಹಾಗೂ ಹಂಚಿಕೊಳ್ಳುತ್ತಿರುವ ಚಿತ್ರಗಳು ಎಐ ಮೂಲಕ ಸೃಜಿಸಿದವು ಎನ್ನಲಾಗುತ್ತಿದೆ' ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಮೊಜ್ತಬಾ ಅನುಪಸ್ಥಿತಿಯು ಅವರ ಕಟ್ಟಾ ಬೆಂಬಲಿಗರಲ್ಲಿ ಆತಂಕ ಉಂಟುಮಾಡಿದೆ. ಇದೇ ಕಾರಣಕ್ಕಾಗಿ ಅವರೆಲ್ಲ, ಅಮೆರಿಕ ಜೊತೆಗಿನ ಶಾಂತಿ ಮಾತುಕತೆ ಕುರಿತ ಸಿಂಧುತ್ವವನ್ನೇ ಪ್ರಶ್ನಿಸುತ್ತಿದ್ದಾರೆ. ಸರ್ವೋಚ್ಚ ನಾಯಕನ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮಾತುಕತೆ ವೇಳೆ ಇರಾನ್ ಅಧಿಕಾರಿಗಳು ಅಮೆರಿಕಕ್ಕೆ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮೊಜ್ತಬಾ ಮೌನದಿಂದಲೂ ಗೊಂದಲ
ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸದಿರುವುದು ಮಾತ್ರವಲ್ಲ. ಅವರು ಮೌನವಾಗಿ ಉಳಿದಿರುವುದರಿಂದ ಸರ್ಕಾರದಲ್ಲೂ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿದೆ. ಮೂಲಭೂತವಾದಿ ನಾಯಕರು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರಂತಹ ಸೌಮ್ಯ ಸ್ವಭಾವದ ನಾಯಕರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಕಣ್ಮರೆ: ಬದುಕಿದ್ದಾರಾ? ಎಲ್ಲಿದ್ದಾರೆ?ಅಮೆರಿಕ ತಿರಸ್ಕರಿಸಿದ ಶಾಂತಿ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡ ಇರಾನ್
ಘಾಲಿಬಾಫ್ ಅವರಂತಹ ನಾಯಕರು ಅಮೆರಿಕದ ಮುಂದೆ ಮಂಡಿಯೂರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರಲಾರಂಭಿಸಿವೆ.
'ಮೊಜ್ತಬಾ ಅವರು ಬದುಕಿದ್ದಾರೆ. ಪ್ರಸ್ತುತ ಮಾತುಕತೆಯಲ್ಲಿ ಅವರು ಪಾತ್ರ ವಹಿಸುತ್ತಿದ್ದಾರೆ' ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಕನಿಷ್ಠ ಧ್ವನಿ ಸಂದೇಶಗಳನ್ನಾದರೂ ಹಂಚಿಕೊಳ್ಳಬೇಕು ಎಂಬ ಕೂಗೆದ್ದಿದೆ.
ಖಮೇನಿಯಿಂದಲೇ ಎಲ್ಲ ನಿರ್ಧಾರ!
ಮೊಜ್ತಬಾ ಅವರ ಸದ್ಯದ ಪರಿಸ್ಥಿತಿ ಏನು? ಅವರು ಈಗ ಹೇಗಿದ್ದಾರೆ? ಎಂಬ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಇರಾನ್ ಸರ್ಕಾರದ ಮುಂದೆ ಇವೆ. ಇವುಗಳಿಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಮಸೌದ್ ಪೆಝೆಶ್ಕಿಯಾನ್, ಮೊಜ್ತಬಾ ಅವರೊಂದಿಗೆ ಇತ್ತೀಚೆಗೆ ಎರಡೂವರೆ ಗಂಟೆ ಸಭೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಆ ಮೂಲಕ ಸರ್ವೋಚ್ಚ ನಾಯಕ ಜೀವಂತವಾಗಿದ್ದಾರೆ. ದೇಶದ ಪರವಾಗಿ ಪ್ರಮುಖ ನಿರ್ಧಾರಗಳನ್ನು ಅವರೇ ಕೈಗೊಳ್ಳುತ್ತಿದ್ದಾರೆ ಎಂಬ ಸಂದೇಶವನ್ನು ಪೆಝೆಶ್ಕಿಯಾನ್ ನೀಡಿದ್ದಾರೆ.
ಮೊಜ್ತಬಾ ಸೇರಿದಂತೆ ಪ್ರಮುಖ ನಾಯಕರನ್ನು ಹತ್ಯೆ ಮಾಡುವುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿತ್ತು. ಇರಾನ್‌ನ ಹಲವು ನಾಯಕರ ಚಿತ್ರಗಳನ್ನೂ ಹಂಚಿಕೊಂಡಿತ್ತು. ಅದೇ ಕಾರಣಕ್ಕೆ ಮೊಜ್ತಬಾ ಅವರು ತಲೆ ಮರೆಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಮೊಜ್ತಬಾ ಸ್ಥಿತಿಯ ಬಗ್ಗೆ ಮೊದಲ ಬಾರಿಗೆ ಬಹಿರಂಗ ಹೇಳಿಕೆ
ಮೊಜ್ತಬಾ ಅವರು ಗಾಯಗೊಂಡಿದ್ದಾರೆ ಎಂಬುದರ ಬಗ್ಗೆ, ಅವರ ಕಚೇರಿಯ ಶಿಷ್ಟಾಚಾರ ವ್ಯವಸ್ಥೆಯ ಮುಖ್ಯಸ್ಥ ಮಜರ್ ಹೊಸೇನಿ ಕಳೆದವಾರ ವಿಡಿಯೊ ಸಂದೇಶ ಹಂಚಿಕೊಂಡಿದ್ದರು.
ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ ಮೊಜ್ತಬಾ ಅವರ ಬೆನ್ನುಹುರಿ ಮತ್ತು ಮೊಣಕಾಲಿಗೆ ಪೆಟ್ಟಾಗಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದ್ದರು.
ಮುಂದುವರಿದು, ಮೊಜ್ತಬಾ ಅವರ ಆಡಿಯೊ ಅಥವಾ ವಿಡಿಯೊವನ್ನು ದುರುಪಯೋಗಪಡಿಸಿಕೊಳ್ಳಲು ವೈರಿ ಪಡೆಗಳು ಯತ್ನಿಸುತ್ತಿವೆ. ಸೂಕ್ತ ಸಮಯದಲ್ಲಿ ಮೊಜ್ತಬಾ ಅವರೇ ನಿಮ್ಮ ಮುಂದೆ ಬರಲಿದ್ದಾರೆ ಎಂಬುದಾಗಿಯೂ ವಿವರಿಸಿದ್ದರು.
ಸ್ವಲ್ಪದರಲ್ಲೇ ಪಾರಾಗಿದ್ದ ಮೊಜ್ತಬಾ
ಫೆಬ್ರುವರಿ 28ರಂದು ನಡೆದ ದಾಳಿ ವೇಳೆ ಮೊಜ್ತಬಾ ಅವರ ತಂದೆ ಹಾಗೂ ಹಿಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವರು ಹತ್ಯೆಯಾಗಿದ್ದರು. ಅದೇ ದಾಳಿ ವೇಳೆ ಮೊಜ್ತಬಾ ಗಾಯಗೊಂಡಿದ್ದಾರೆ ಎನ್ನಲಾದ ಆಡಿಯೊವನ್ನು 'ಖಿhe ಖಿeಟegಡಿಚಿಠಿh' ಹಂಚಿಕೊಂಡಿತ್ತು.
ಅಂದು ಇಸ್ರೇಲ್ ಕ್ಷಿಪಣಿ ದಾಳಿ ನಡೆದ ಸ್ವಲ್ಪವೇ ಸಮಯಕ್ಕೂ ಮುನ್ನ ಮೊಜ್ತಬಾ ಅವರು, ಅಯತೊಲ್ಲಾ ನಿವಾಸದ ಆವರಣದಲ್ಲಿರುವ ಉದ್ಯಾನದಲ್ಲಿ ವಿಹಾರಕ್ಕೆ ಬಂದಿದ್ದರು. ಹಾಗಾಗಿಯೇ, ಅವರ ಜೀವ ಉಳಿದಿದೆ ಎಂದು ಹೇಳಲಾಗಿತ್ತು.
ದಾಳಿ ವೇಳೆ ಅಯತೊಲ್ಲಾ, ಮೊಜ್ತಬಾ ಪತ್ನಿ, ಮಗ ಮಾತ್ರವಲ್ಲದೆ, Iಖಉಅ ಮುಖ್ಯಸ್ಥ ಮೊಹಮ್ಮದ್ ರಕ್ಪೌರ್, ಇರಾನ್ ರಕ್ಷಣಾ ಸಚಿವ ಅಜಿಜ್ ನಾಸಿರ್ಜೇದ್ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಮೃತಪಟ್ಟಿದ್ದಾರೆ.
ಈ ಹಿಂದೆಯೂ ಕಣ್ಮರೆಯಾಗಿದ್ದ ಮೊಜ್ತಬಾ
ಮೊಜ್ತಬಾ ನಾಪತ್ತೆಯಾಗಿರುವುದು ಇದೇ ಮೊದಲೇನಲ್ಲ.
ಇರಾಕ್ ವಿರುದ್ಧ 1985ರಲ್ಲಿ ನಡೆದ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ಅವರು, ಒಂದು ವಾರ ಕಣ್ಮರೆಯಾಗಿದ್ದರು. ಹೀಗಾಗಿ, Iಖಉಅ ಕಮಾಂಡರ್‌ಗಳು ಅವರನ್ನು ಅನನುಭವಿ ಹೋರಾಟಗಾರ ಎಂದು ಹೇಳಿದ್ದರು. ಆದರೆ, ಮೊಜ್ತಬಾ ಬದುಕುಳಿದಿರುವುದು ಒಂದು ವಾರದ ನಂತರ ಗೊತ್ತಾಗಿತ್ತು.
ಮೊಜ್ತಬಾ ಮಾತ್ರವಲ್ಲ. ಸಂಘರ್ಷ ಆರಂಭವಾದಾಗಿನಿಂದ ಅಯತೊಲ್ಲಾ ಅವರ ಇತರ ಮಕ್ಕಳೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಮೊಜ್ತಬಾ ಅವರು ಯುದ್ಧದ ಕುರಿತು ದೂರದರ್ಶನದಲ್ಲಿ ಸಂದೇಶ ಓದಿದ್ದನ್ನು ಬಿಟ್ಟರೆ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ಈ ಎಲ್ಲ ವದಂತಿಗಳ ನಡುವೆ, ಮೊಜ್ತಬಾ ಅವರು ರಷ್ಯಾಗೆ ಪಲಾಯನ ಮಾಡಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಊಹಾಪೋಹಗಳೂ ಹರಿದಾಡಿದ್ದವು.

