ದೇಶದಲ್ಲಿ ಮೊದಲ ಬಾರಿಗೆ ಇಂತಹ ಬೃಹತ್ ಯುದ್ಧವಿಮಾನ ನಿರ್ಮಾಣ ಯೋಜನೆಯಲ್ಲಿ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಸ್ಥೆಯಾದ ಎಚ್‌ಎಎಲ್‌ಗೆ ಅವಕಾಶ ನೀಡಿಲ್ಲ.
ಪ್ರಸ್ತುತ ಎಚ್‌ಎಎಲ್ 4.5 ಪೀಳಿಗೆಯ ತೇಜಸ್ ಯುದ್ಧವಿಮಾನ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು, ಭಾರತೀಯ ವಾಯುಪಡೆಯಿಂದ ತೇಜಸ್ ವಿಮಾನಗಳಿಗೆ ಸಂಬಂಧಿಸಿದ ಎರಡು ದೊಡ್ಡ ಕಾರ್ಯಾದೇಶಗಳು ಇನ್ನೂ ಬಾಕಿ ಇವೆ.
ಐದನೇ ಪೀಳಿಗೆಯ ಯುದ್ಧವಿಮಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಬುಧವಾರ ಪ್ರಸ್ತಾವನೆಗಳ ಮನವಿ (ಆರ್‌ಎಫ್‌ಪಿ) ಹೊರಡಿಸಿದೆ. ಅಮೆರಿಕದ ಎಫ್-35 ಲೈಟ್ನಿಂಗ್-II ಹಾಗೂ ರಷ್ಯಾದ ಎಸ್-57 ಯುದ್ಧವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿ ಪರಿಗಣಿಸಲಾಗುತ್ತಿರುವ ಅತ್ಯಾಧುನಿಕ ಮಧ್ಯಮ ತೂಕದ ಯುದ್ಧವಿಮಾನ (ಎಎಂಸಿಎ) ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಪ್ರಸ್ತಾವನೆ ಆಹ್ವಾನಿಸಲಾಗಿದೆ.
ಎಎಂಸಿಎ ಯೋಜನೆಯ ಪ್ರೊಟೊಟೈಪ್ ಹಂತದ ಅಂದಾಜು ವೆಚ್ಚ ಸುಮಾರು ₹15 ಸಾವಿರ ಕೋಟಿ ಎಂದು ತಿಳಿದುಬಂದಿದೆ. ಈ ಯುದ್ಧವಿಮಾನವು ಮಧ್ಯಮ ತೂಕದ, ಬಹುಪಾತ್ರ ಸಾಮರ್ಥ್ಯದ ಹಾಗೂ ಅವಳಿ ಎಂಜಿನ್ ಹೊಂದಿದ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಕಾರ್ಯಾಚರಣಾ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.
ಹೊಸ ಯೋಜನೆಗಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜೊತೆಗೆ ಲಾರ್ಸನ್ ಅಂಡ್ ಟೂಬ್ರೊ ಹಾಗೂ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಸಹಯೋಗದಲ್ಲಿ ಭಾರತ್ ಫೋರ್ಜ್ ಸೇರಿದಂತೆ ಮೂರು ಖಾಸಗಿ ವಲಯದ ಗುಂಪುಗಳನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.
ಈ ಕಂಪನಿಗಳು ಆರ್‌ಎಫ್‌ಪಿಗೆ ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಮುಂದಿನ 4-5 ತಿಂಗಳಲ್ಲಿ ಅಂತಿಮ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

