ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜನರ ಕಲ್ಯಾಣಕ್ಕಾಗಿ ರಾಜ್ಯ ಸರಕಾರದ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಕೈಗೆಟುಕುವ ದರದಲ್ಲಿ ಮೀನೂಟ, ಅನ್ನಪೂರ್ಣ ಯೋಜನೆ ಮತ್ತು ಮದ್ಯದ ಅಂಗಡಿಗಳಿಗೆ ವಿಧಿಸಲಾಗಿರುವ ನಿರ್ಬಂಧಗಳು ಸೇರಿವೆ.
ಮೇ 27 ರಿಂದ ತನ್ನ ಸರಕಾರವು ಅನ್ನಪೂರ್ಣ ಯೋಜನೆಯ ಅರ್ಜಿಗಳನ್ನು ವಿತರಿಸಲು ಪ್ರಾರಂಭಿಸಲಿದೆ ಎಂದು ಅಧಿಕಾರಿ ತಿಳಿಸಿದರು. ಈ ಯೋಜನೆಯಡಿ ಮಹಿಳೆಯರು ತಿಂಗಳಿಗೆ 3,000 ರೂಪಾಯಿ ಪಡೆಯಲಿದ್ದಾರೆ.
ಶಾಲೆಗಳು, ಕಾಲೇಜುಗಳು ಮತ್ತು ಧಾರ್ಮಿಕ ಸ್ಥಳಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡುವುದಿಲ್ಲ ಎಂಬುದಾಗಿಯೂ ಅವರು ಘೋಷಿಸಿದ್ದಾರೆ.
ತನ್ನ ಸರಕಾರವು ವಾರಕ್ಕೆ ಎರಡು ಬಾರಿ ಸುಮಾರು 400 ನಿಯೋಜಿತ ಕ್ಯಾಂಟೀನ್‌ಗಳಲ್ಲಿ ಐದು ರೂಪಾಯಿಗೆ ಮೀನು ಸಾರಿನ ಊಟವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನದಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ನಡೆದ ಆಡಳಿತಾತ್ಮಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ''ನಾಳೆಯಿಂದ ರಾಜ್ಯ ಸಚಿವಾಲಯದಿಂದ ಅನ್ನಪೂರ್ಣ ಯೋಜನೆಯ ಅರ್ಜಿಗಳನ್ನು ವಿತರಿಸಲಾಗುವುದು. ಭಾರತದ ಎಲ್ಲಾ ನಾಗರಿಕರು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ'' ಎಂದು ಹೇಳಿದರು.

