ನವದೆಹಲಿ: ಗೋಹತ್ಯೆ ಸಂಪೂರ್ಣ ನಿಷೇಧ ಕಾನೂನಿನ ಪರಿಣಾಮಕಾರಿ ಜಾರಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
'ಇದು ನಿಮಗೆ ನಿನ್ನೆಯಷ್ಟೇ ನೆನಪಾಗಿದೆ. ಇದರಲ್ಲಿಯಾವುದೇ ತುರ್ತು ಇಲ್ಲ.
ಧನ್ಯವಾದಗಳು' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ.
ವಕೀಲ ವರುಣ್ ಕುಮಾರ್ ಸಿನ್ಹಾ ತುರ್ತು ವಿಚಾರಣೆ ಕೋರಿ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ನಾಡಿದ್ದು ಬಕ್ರೀದ್. ಹಾಗಾಗಿ, ಗೋಹತ್ಯೆ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಕೋರಿರುವ ಮನವಿಯನ್ನು ನಾಳೆಯೇ ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ವಕೀಲರು ವಾದಿಸಿದ್ದರು.
ಅಖಿಲ ಭಾರತ ಹಿಂದೂ ಮಹಾಸಭಾದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಅಗರ್ವಾಲ್ ಈ ಪಿಐಎಲ್ ಸಲ್ಲಿಸಿದ್ದರು.
ಗೋವು ಮತ್ತು ಅದರ ಸಂತತಿಯನ್ನು ವಧೆಯಿಂದ ರಕ್ಷಿಸಲು ಗೋಹತ್ಯೆ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶನ ನೋಡುವಂತೆ ಕೋರಿದ್ದರು ಪ್ರತಿಯೊಂದು ರಾಜ್ಯದಲ್ಲೂ ಕಸಾಯಿಖಾನೆಗಳನ್ನು ಕಾನೂನಿನ ಪ್ರಕಾರ ನಿಯಂತ್ರಿಸಲು ಮಾರ್ಗಸೂಚಿ ಹೊರಡಿಸುವಂತೆ ನಿರ್ದೇಶನ ನೀಡುವಂತೆಯೂ ಕೋರಿದ್ದರು.

