ಜೈಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಸಾಧನೆಗಳನ್ನು ವಿವರಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯ ವೇಳೆ ವಿದ್ಯುತ್ ಕಡಿತ ಉಂಟಾಗಿರುವುದರಿಂದ ರಾಜಸ್ಥಾನದ ಬಿಜೆಪಿ ಸರ್ಕಾರ ಮುಜುಗರಕ್ಕೀಡಾಗಿದ್ದು, ಈ ಕುರಿತು ತನಿಖೆಗೆ ಆದೇಶಿಸಿದೆ.
ಜೈಪುರದ ಬಿಜೆಪಿ ಪಕ್ಷದ ರಾಜ್ಯ ಕಚೇರಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಈ ವೇಳೆ ಮೊಬೈಲ್ ಟಾರ್ಚ್ ಲೈಟ್ ಮತ್ತು ಕ್ಯಾಮೆರಾ ಲೈಟ್ ಬೆಳಕಿನಲ್ಲಿ ಪತ್ರಿಕಾಗೋಷ್ಟಿಯನ್ನು ಮುಂದುವರಿಸಲಾಗಿದೆ.
ಈ ಕುರಿತು ತನಿಖೆ ನಡೆಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ರಾಜಸ್ಥಾನದ ಇಂಧನ ಸಚಿವ ಹೀರಾಲಾಲ್ ನಗರ್ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಚುನಾಯಿತ ಪ್ರಧಾನಿಯಾಗಿ 4,399 ದಿನಗಳ ದೀರ್ಘ ಸೇವೆಯ ದಾಖಲೆಯ ಹಿನ್ನೆಲೆ ಸರಕಾರದ 12 ವರ್ಷಗಳ ಸಾಧನೆಯನ್ನು ವಿವರಿಸಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರರು ಕೇಂದ್ರದ ಸಾಧನೆಗಳನ್ನು ವಿವರಿಸುತ್ತಿದ್ದಾಗ ಸುಮಾರು 15 ನಿಮಿಷಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಅಶ್ವಿನಿ ವೈಷ್ಣವ್, ಸಚಿವ ಹೀರಾಲಾಲ್ ನಗರ್, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಉಪಸ್ಥಿತರಿದ್ದರು.
ಈ ಕುರಿತು ರಾಜಸ್ಥಾನ ರಾಜ್ಯ ವಿದ್ಯುತ್ ಪ್ರಸಾರಣ ನಿಗಮ ಲಿಮಿಟೆಡ್ (RVPN) ಮತ್ತು ಜೈಪುರ ಡಿಸ್ಕಾಂ ಅಧಿಕಾರಿಗಳಿಂದ ಸಚಿವರು ವಿವರವಾದ ಮಾಹಿತಿಯನ್ನು ಕೋರಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಗುರುವಾರ ಮಧ್ಯಾಹ್ನ 3.57ಕ್ಕೆ ಸರ್ಕ್ಯೂಟ್ ಬ್ರೇಕರ್‌ನಲ್ಲಿ ಅನಿಲ ಸೋರಿಕೆ ಸಂಭವಿಸಿತ್ತು. ಈ ದೋಷವನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಎರಡು ಟ್ರಾನ್ಸ್ಫಾರ್ಮರ್‌ಗಳು ಏಕಕಾಲದಲ್ಲಿ ಟ್ರಿಪ್ ಆಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಸಮಸ್ಯೆಗೆ ಒಳಗಾದ ಎರಡೂ ಟ್ರಾನ್ಸ್ಫಾರ್ಮರ್‌ಗಳನ್ನು ಸಂಜೆ 4.21ರ ವೇಳೆಗೆ ಸಂಪೂರ್ಣವಾಗಿ ದುರಸ್ತಿಗೊಳಿಸಿ ವಿದ್ಯುತ್ ವ್ಯವಸ್ಥೆಯನ್ನು ಮರು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಇಂಧನ ಸಚಿವ ಹೀರಾಲಾಲ್ ನಾಗರ್ ಅವರು ತಿಳಿಸಿದ್ದಾರೆ.

