ಕಾಸರಗೋಡು: ಮೀನುಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸಿ ಆ ಮೂಲಕ ಮತ್ಸ್ಯ ಸಂಪತ್ತನ್ನು ವೃದ್ಧಿಗೊಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ತಡೆಗಟ್ಟುವ ಟ್ರೋಲಿಂಗ್ ನಿಷೇಧ ರಾಜ್ಯದಲ್ಲಿ ಮಂಗಳವರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಮಂಗಳವಾರ ಸಂಜೆಯ ವೇಳೆಗೇ ದೋಣಿಗಳು ದಡ ಸೇರುತ್ತಿದ್ದು, ರಾತ್ರಿ ವಏಳೆಗೆ ಸುರಕ್ಷಿತ ತಾಣಗಳಲ್ಲಿ ಲಂಗರು ಹಾಕಲಿದೆ. ರಾಜ್ಯದಲ್ಲಿ ಆಳಸಮುದ್ರ ಮೀನುಗಾರಿಕೆಮೇಲಿನ ನಿಷೇಧ ಜುಲೈ 31ರ ತನಕ ಮುಂದುವರಿಯಲಿದೆ. ಸಾಮಾನ್ಯವಾಗಿ ಎರಡು ತಿಂಗಳ ಕಾಲ ಟ್ರೋಲಿಂಗ್ ನಿಷೇಧ ಜಾರಿಯಲ್ಲಿರುತ್ತಿದ್ದರೆ, ಕೇರಳದಲ್ಲಿ ಇದು 52 ದಿವಸಗಳಿಗೆ ಸೀಮಿತಗೊಳಿಸಲಾಗಿದೆ.
ಟ್ರೋಲಿಂಗ್ ನಿಷೇಧ ಜಾರಿ ಹಿನ್ನೆಲೆಯಲ್ಲಿ ಕೇರಳದ ವ್ಯಾಪ್ತಿಗೆ ಸೇರಿದ ಆಳ ಸಮುದ್ರದಲ್ಲಿ ಯಾರೂ ಮೀನುಗಾರಿಕೆ ನಡೆಸುವಂತಿಲ್ಲ. ಈ ನಿಷೇಧವನ್ನು ಉಲ್ಲಂಘಿಸಿದಲ್ಲಿ ಬೋಟ್‍ಗಳನ್ನು ವಶಕ್ಕೆ ತೆಗೆದುಕೊಳ್ಳುವುದರ ಜತೆಗೆ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಶಿಕ್ಷಾ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನಿಷೇಧ ಜಾರಿಯಲ್ಲಿರುವ ಮುಂದಿನ 52 ದಿನಗಳ ಕಾಲ ಮೀನುಕಾರ್ಮಿಕರು ಕೆಲಸವಿಲ್ಲದೆ ತಮ್ಮ ಆದಾಯ ಮಾರ್ಗವನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಮೀನುಗಾರಿಕಾ ಇಲಾಖೆಯ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಒಟ್ಟು 129 ಯಾಂತ್ರೀಕೃತ ಮೀನುಗಾರಿಕಾ ಬೋಟ್‍ಗಳಿವೆ. ಇದರಲ್ಲಿ ಕಾಸರಗೋಡು ಕಸಬಾದ 12, ಮಂಜೇಶ್ವರ 23, ಕುಂಬಳೆ ಆರಿಕ್ಕಾಡಿಯ 4, ಹೊಸದುರ್ಗ 18, ತೈಕಡಪ್ಪುರ 22, ನೀಲೇಶ್ವರ 13, ಮಡಿಕ್ಕರ 30 ಮತ್ತು ಪಡನ್ನ ಕಡಪ್ಪುರದಲ್ಲಿ 7 ಯಾಂತ್ರೀಕೃತ ಬೋಟ್‍ಗಳು ಒಳಗೊಂಡಿವೆ. ಇವುಗಳ ಹೊರತಾಗಿ ಜಿಲ್ಲೆಯ ವಿವಿಧ ಮೀನುಗಾರಿಕಾ ಕೇಂದ್ರಗಳಲ್ಲಾಗಿ 200ರಷ್ಟು ಯಾಂತ್ರೀಕೃತ ಬೋಟ್‍ಗಳು ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ಇಳಿಯುತ್ತಿರುವುದಾಗಿಯೂ ಮೀನುಗಾರಿಕಾ ಇಲಾಖೆ ಲೆಕ್ಕಾಚಾರ ತಿಳಿಸುತ್ತದೆ.
ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಮಾತ್ರ ಆಶ್ರಯಿಸಿಕೊಂಡು ಜೀವನ ನಡೆಸುತ್ತಿರುವ ಬೆಸ್ತ ಸಮುದಯದವರು ಮತ್ತು ಇತರ ಕಾರ್ಮಿಕರು ಸೇರಿದಂತೆ ಒಟ್ಟು 16,000ಕ್ಕೂ ಹೆಚ್ಚು ಮಂದಿ ಮೀನುಗಾರಿಕೆಯನ್ನು ಆಶ್ರಯಿಸುತ್ತಿದ್ದಾರೆ.

