ಮುಂಬರುವ ದಿನಗಳಲ್ಲಿ ಇಂಧನ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸಿಎನ್‌ಎನ್-ನ್ಯೂಸ್18 ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪುರಿ ಹೇಳಿದರು. ದೇಶಕ್ಕೆ ಸದ್ಯಕ್ಕೆ ಯಾವುದೇ ಇಂಧನ ಕೊರತೆಯ ಆತಂಕವಿಲ್ಲ ಎಂಬ ಭರವಸೆಯನ್ನೂ ಅವರು ನೀಡಿದರು.
ಇಷ್ಟೆಲ್ಲಾ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ, ದೇಶದ ಯಾವುದೇ ಭಾಗದಲ್ಲಿ ಇಂಧನ ಖಾಲಿಯಾಗುವ ಪರಿಸ್ಥಿತಿ ಬಂದಿಲ್ಲ ಮತ್ತು ನಾವು ಇನ್ನೂ ರಫ್ತು ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.
ಹಾರ್ಮುಝ್ ಜಲಸಂಧಿ ಮುಚ್ಚಲ್ಪಟ್ಟರೂ, ಭಾರತದ ಬಳಿ ಕನಿಷ್ಠ 30ರಿಂದ 60 ದಿನಗಳವರೆಗೆ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವಷ್ಟು ಆಯಕಟ್ಟಿನ ತೈಲ ದಾಸ್ತಾನು, ಸಂಸ್ಕರಣಾಗಾರಗಳ ದಾಸ್ತಾನು ಮತ್ತು ವಾಣಿಜ್ಯ ದಾಸ್ತಾನುಗಳು ಇವೆ ಎಂದು ಅವರು ಹೇಳಿದರು. ತೈಲ ಬೆಲೆಗಳು ದೀರ್ಘಕಾಲದವರೆಗೆ ಇಷ್ಟು ಗರಿಷ್ಠ ಮಟ್ಟದಲ್ಲಿ ಇರುವುದಿಲ್ಲ ಎಂದು ತಾನು ನಿರೀಕ್ಷಿಸುವುದಾಗಿಯೂ ಅವರು ನುಡಿದರು.
''ಒಂದು ವೇಳೆ ಹಾರ್ಮುಝ್ ಜಲಸಂಧಿ ಇನ್ನೂ 30 ದಿನಗಳ ಕಾಲ ಮುಚ್ಚಲ್ಪಟ್ಟರೆ ಏನಾಗುತ್ತದೆ? ನಮ್ಮಲ್ಲಿ 60 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಎಲ್‌ಪಿಜಿ ದಾಸ್ತಾನು ಇರಬೇಕು ಎನ್ನುವುದು ಸಾಮಾನ್ಯ ಪರಿಸ್ಥಿತಿಯಲ್ಲಿ ನನ್ನ ನೀತಿಯಾಗಿದೆ. ಈಗ ಅಷ್ಟು ಪ್ರಮಾಣದ ದಾಸ್ತಾನು ಇದೆ. ಹಾಗಾಗಿ ಪರಿಸ್ಥಿತಿ ಉತ್ತಮವಾಗಿದೆ ಎಂದು ನಾನು ಹೇಳುತ್ತೇನೆ'' ಎಂದು ಪುರಿ ನುಡಿದರು.

